ಜಿ.ಎಸ್.ಹೆಗಡೆ-ಓ ಬಾಲ್ಯವೇ ಮತ್ತೆ ನೀ ಬಾ—-

ಕಾವ್ಯಸಂಗಾತಿ

ಜಿ.ಎಸ್.ಹೆಗಡೆ

ಓ ಬಾಲ್ಯವೇ ಮತ್ತೆ ನೀ ಬಾ—-

ಓ ಬಾಲ್ಯವೇ ಮರೆಯಾದೆ ನೀನೇಕೆ ?
ಮತ್ತೊಮ್ಮೆ ನೀ ಎದುರು ನಿಲಬಾರದೇ?
ಹರಿದ ಚಡ್ಡಿಯ ಜೊತೆಗೆ ಕಿತ್ತ ಗುಂಡಿಯ ಅಂಗಿ
ಆಗಾಗ ತಿಂದಿದ್ದು ನಾಲ್ಕಾಣೆ ಐಸ್ ಕ್ಯಾಂಡಿ

ಗಾಳಿ ಬೀಸುವ ವೇಳೆ ಮಾಮರದ ಅಡಿಯಲ್ಲಿ
ಹಣ್ಣನಾಯುತ ಜೊತೆಗೆ ಮರಕೋತಿಯಾಟ
ಹುಣಸೆ ಹಣ್ಣನು ಕದ್ದು ಹಸಿಮೆಣಸ ಜೊತೆ ಕುಟ್ಟಿ
ಚಪ್ಪರಿಸಿದ ಆ ದಿನವು ನಮಗೆ ಸಿಹಿಯೂಟ

ಕಾಲ ಒಳ ಹಾಕುತ್ತ ಸೈಕಲ್ ಪೆಡಲ್ ತುಳಿಯುತ್ತ
ಬಿದ್ದು ಏಳುವ ನಮಗೆ ಮೊಣಕಾಲು ಗಾಯ
ಸುರಿವ ನೆತ್ತರಿಗೆ ಮಣ್ಣ ಕಟ್ಟನು ಹಾಕಿ
ಗಾಯ ಗುಣಪಡಿಸುವ ನಾನು ನಾಟಿ ವೈದ್ಯ

ಮರದಡಿಗೆ ಓದಿದರೆ ನೆನಪು ಉಳಿಯುವುದಂತೆ
ನಮ್ಮ ಸಿದ್ದಾಂತವನು ಹಿರಿಯರಿಗೆ ಹೇಳಿ
ಗೋಣಿ ಚೀಲವ ಕಟ್ಟಿ ಜೋಕಾಲಿ ಆಡುತಲಿ
ಅಲ್ಲೆ ನಿದ್ದೆಯು ಬರಲು ಓದದ್ದು ಎಲ್ಲಿ?

ಚಿಮಣಿ ದೀಪದ ಸುತ್ತ ದೀಪದ ಹುಳುವಂತೆ
ಸುತ್ತಲೂ ಕುಳಿತು ಓದು ಬರೆದಿಹ ನೆನಪು
ಮತ್ತೆ ನಸುಕಿನಲೆದ್ದು ತುಳಸಿ ಕಟ್ಟೆಯ ಸುತ್ತಿ
ದೇವರ ಧ್ಯಾನದೊಳು‌ ಮುಳುಗೆದ್ದ ಹುರುಪು

ಹಬ್ಬಗಳ ಸಾಲುಗಳು ಒಟ್ಟಿಗೇ ಬರುತಿರಲು
ವಡೆ ಚಕ್ಕುಲಿಗಳ ಕಿಸೆಯೊಳಗೆ ತುಂಬಿ
ಗೇರು ಬೀಜವ ಹಿಸುಕಿ ಬಾಯ ಚಪ್ಪರಿಸಲು
ಸುಟ್ಟ ಗಾಯದ ನೋವ ಬಾಯೊಳಗೆ ನುಂಗಿ

ಮರೆಯಾದೆ ನೀನೇಕೆ ನನ್ನ ಒಂಟಿಯ ಮಾಡಿ
ಬಾಲ್ಯದ ನನ ಗೆಳೆಯರು ಈಗಿರುವರೆಲ್ಲಿ?
ಅವರ ಜೊತೆ ನನಗೂ ಮತ್ತೆ ಬಾಲ್ಯವ ತೊಡಿಸಿ
ತುಂಟಾಟ ಆಡಿಸು ನೀ ನಾ ನಗುವೆನಿಲ್ಲಿ


2 thoughts on “ಜಿ.ಎಸ್.ಹೆಗಡೆ-ಓ ಬಾಲ್ಯವೇ ಮತ್ತೆ ನೀ ಬಾ—-

Leave a Reply

Back To Top