ಕಾವ್ಯ ಸಂಗಾತಿ
ತುಂಬಿದ ಸರೋವರ
ದೇವೂ ಮಾಕೊಂಡ
ತುಂಬಿದ ಸರೋವರ
ಹೊರಟಿತೊಂದು ಬಯಲ ಪಯಣಕೆ
ಸಂತ,ಸನಾತನ,ನಿರಾಳ ನೀರಡಿಕೆ
ಬಿಟ್ಟು ,ಎಲ್ಲವೂ ಬಿಟ್ಟು ;
ಪ್ರೇಮ,ಪ್ರಕೃತಿ,ವೇದ,ಆಗಮ
ಮೊಗ್ಗು,ಹೂವು,ಚೂರು ಕಾಯಿಗಳು
ಅಡ್ಡ ಬಂದ ವೈಭವ;
ಬಿರುದು ಹೂಬಳ್ಳಿ
ನೀರಾಡುವ ದಡದಿ ಬಿಟ್ಟು
ಈಜಿ ಹೊರಟಿತು, ಮಹಾಕೂಟಕೆ
ಜ್ಞಾನದ ಕೋವಿ ಹಿಡಿದು
ಬಯಲಿಗೆ ಬಯಲೇ ಸ್ವರ್ಗ-ಗುರಿ ಸರೋವರಕೆ
ಹರಿವ ಬಯಲಿಗೆ ಅದಾವ ಭಯ
ತನ್ನೊಳಗೆ ಮಿಂದ ನೂರೊಂದು ನದಿಗಳು
ನೂರೊಂದು ಹಾದಿಗಳು
ಯಾವುದಕ್ಕೆ ವಿದಾಯ
ಇನ್ನಾವುದಕ್ಕೆ ಸ್ವಾಗತ
ಎಲ್ಲವೂ ಬಯಲ ಅಭಯದ ಪರಿವಿಡಿ
ನಾಳೆಗಳ ಕಾಲದ ಕನ್ನಡಿ
ಉಸಿರಿಗೂ
ಗಾಳಿಗೂ
ಮಣ್ಣ ಕಂಪಿಗೂ ಮೂಲ ಬೇರಿನ ಪದವ ಬರೆದು
ಸಾಲು ನಿಂತ ಗುಡ್ಡ ಬೆಟ್ಟ ನದಿತೊರೆಯ ಮೇಲೆ ಹಾಡು ಹರಿಯಲೆಂದು
ಬಯಲಲ್ಲಿ ಬಯಲಾದ ಭವಸಾಗರ
(ಜ್ಞಾನಯೋಗಿ ಸಿದ್ದೇಶ್ವರ)