ಕಾವ್ಯ ಸಂಗಾತಿ
ಅನಾರ್ಕಲಿ ಸಲೀಂ ಮಂಡ್ಯ
ನನ್ನೊಲವಿನ ಹನಿಗವನಗಳು
1)
ಮೀನು ಮತ್ತು ಮುದ್ದೆಯ
ಒಲವಿಗೆ ಸಾಕ್ಷಿ
ಸಕ್ಕರೆ ಮಡಿಲ ನಾನು
ಕಡಲ ತೀರದ ಅವಳು!
2)
ನಮ್ಮೊಲವಿನ
ಹೊಳಪಿನ ಹಿಂದೆ
ಉಪ್ಪು ಸಕ್ಕರೆಯ ನಂಟಿದೆ
ಸ್ವಲ್ಪ ಮಾತ್ರ ಬೆಲ್ಲದ ಅಂಟಿದೆ!
3)
ಕಡಲೆಂದರೆ…….
ಮೊದ ಮೊದಲು ಭಯವಿತ್ತು
ಕಡಲ ತೀರದವಳೇ
ಅಭಯವಾದ ಮೇಲೆ
ಅಲೆಗಳ ಜೊತೆಯೇ
ಮೀಯುತ್ತಿದ್ದೇನೆ!
4)
ಪ್ರೀತಿಸುವುದು ಸಹ
ಒಂದು ಧ್ಯಾನವೇ
ಹಾಗಾಗಿ ಆಗಾಗ ಅವಳೆದುರು
ಕಣ್ಣುಮುಚ್ಚಿ ಮೌನವಾಗಿ
ಧ್ಯಾನಕ್ಕೆ ಕುಳಿತು ಬಿಡುತ್ತೇನೆ
ಅವಳೊಲಿದು ಧ್ಯಾನ ಭಂಗ
ಮಾಡುವವರೆಗೆ!
5)
ಒಲವೆಂದರೆ ಬೆರಗು
ಒಲವೆಂದರೆ ಬೆಳಗು
ಅವಳೊಳಗೆ ನಾನು
ನನ್ನೊಳಗೆ ಅವಳು
ಕೂಡಿರಲು ಬದುಕಿಗೆ
ಮೆರುಗಿನ ಸೊಬಗು!
6)
ನಾನು ಮತ್ತು ಅವಳು
ಬಹಳ ಸಲ ಸೋತಿದ್ದೇವೆ
ಲೆಕ್ಕವೇ ಸಿಗದಂತೆ
ಒಲವನ್ನು ಗೆಲ್ಲಿಸಲು!
7)
ಅಲ್ಲಿ ಇಲ್ಲಿ ಸುತ್ತುವ ಬದಲು
ನಾನು ಮೊದಲಿಗೆ ಅವಳನ್ನೇ ಸುತ್ತಿದೆ
ತಲೆಸುತ್ತುಬಂದು ಬೀಳುವಾಗ
ಒಲಿದ ಅವಳು ಕೈ ಹಿಡಿದು
ಒಲವಾದಳು,ವರವಾದಳು
ಬದುಕಾದಳು,ಬೆಳಕಾದಳು!
8)
ಕಡಲೆಂದರೆ
ಕಪ್ಪೆಚಿಪ್ಪು,ಮರಳು
ಎನ್ನುತ್ತಿದ್ದವನು
ಅವಳೊಲವಿಗೆ ಮರುಳಾಗಿ
ಬೆರೆತು ಮುತ್ತುಗಳನ್ನು
ಅರಸುತ್ತಾ ಬೆವರುತ್ತಿದ್ದೇನೆ
ದಾಹ ತಣಿಯದೆ!!
9)
ನಾನು ಸಹ
ಈ
ಜಗದ ಪ್ರೇಮಿ
ಅಂದಿನಿಂದ
ಇಂದಿನವರೆಗೂ
ಮಡಿಲ
ವಾತ್ಸಲ್ಯದಲ್ಲೇ
ಕಾಪಿಟ್ಟಿದ್ದಾಳೆ
ಈ ಭೂಮಿ!
ನಮಸ್ತೆ ಸರ್
ಸಂಗಾತಿ ನನ್ನ ಬರಹಕ್ಕೆ ಸಂಗಾತಿಯಾಗಿದ್ದಕ್ಕೆ ಧನ್ಯವಾದಗಳು
ಪ್ರಜಾವಾಣಿ ಯಲ್ಲಿ ಬಹಳ ಹಿಂದೆ ನಿಮ್ಮ ಹನಿಗವನ ಓದುತ್ತಿದ್ದೆ
ಪ್ರೇಮಾಂತರಾಳದ ನುಡಿಗಳು ಸುಂದರ