ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಮನವರಿಕೆ….!
ಕಣ್ಣಾಲೆ ತುಂಬಿತ್ತು
ದುಃಖದ ಕಟ್ಟೆ ಒಡೆದಿತ್ತು
ಮುಖದಲ್ಲಿ ವಿಷಾದ ಛಾಯೆ
ಅವನು ತೊರೆದ ದಿನದಿಂದ
ಮನದಲ್ಲೆನೋ ನೀರವ ಮೌನ
ನಿತ್ಯವೂ ವನವಾಸ
ಮರೆಯಾದ ಚಣದಿಂದ
ಒಡಲು ತಂತಿ ಹರಿದ
ವೀಣೆಯಾಯಿತು
ಕನಸು ಬತ್ತಿದ ಕಡಲಾಯಿತು…
ಒಳಗೊಳಗೆ ಆವಿರ್ಭವಿಸಿದ
ಪ್ರಶ್ನೆ,
ನಾನು ಅನುಮಾನಿಸಬಾರದಿತ್ತು..?
ನತದೃಷ್ಟ ಹೆಣ್ಣು ನಾನು
ಈ ತನುವು ಜೀವವಿಲ್ಲದ
ಬೊಂಬೆಯಾಯಿತು…
ಗಾಳಿಯಲ್ಲೂ ಅವನುಸಿರು
ತೆರೆಯಲ್ಲಿ ಹೆಜ್ಜೆಸದ್ದು,
ಇಂದು ಮುಷ್ಕರ ದಿನ
ಬೊಗಸೆ ಕಣ್ಣಿನ ಚಂದ್ರನಿಗೆ,
ಕೂಡಿಟ್ಟ ಕನಸುಗಳು
ಸುಟ್ಟು ಬೂದಿಯಾದಗಳಿಗೆ,
ಅಳುವೊಂದೆ ಶಾಶ್ವತವು
ಈ ಪಾಪಿ ಕಂಗಳಿಗೆ
ಅವನು ಕೊಟ್ಟ ಬುಲಾಕು
ಪರ್ಸಿನಲ್ಲಿ ಮಿನುಗುತ್ತಿದೆ,
ನನ್ನನ್ನು ಹಳಿದುಕೊಳ್ಳುತ್ತಿದ್ದೇನೆ,
ಮಸ್ತಕದಲಿ ಅದೆ ಕನವರಿಕೆ…
ನನ್ನದು ತಪ್ಪಾಯಿತು…?
“ಕ್ಷಮಿಸಿಬಿಡು ನನ್ನ”
ಎಂಬ ನುಡಿ ಶ್ರವ್ಯದಲಿ
ಸುಪ್ತಿಯೊಳಿರಲು ಮನವರಿಕೆ…