ಪ್ರೊ ರಾಜನಂದಾ ಘಾರ್ಗಿ ನೀ ನೀಡಿದ ಗುಲಾಬಿ

ಕಾವ್ಯ ಸಂಗಾತಿ

ಪ್ರೊ ರಾಜನಂದಾ ಘಾರ್ಗಿ

ನೀ ನೀಡಿದ ಗುಲಾಬಿ

ಏನು ಬರೆಯಲಿ ಹೇಳು ಇನಿಯ
ಯಾವ ಎರಡು ಸಾಲು ಬರೆಯಲಿ

ನಿನ್ನ ಕಣ್ಣ ಯಕ್ಷಿಣಿಯ ಮೊಡಿಗೆ ಒಳಗಾಗಿ
ಬರೆದ ಸಾಲುಗಳ ಸರಣಿ ಬೆಳೆಯುತ್ತಾ
ನನಗರಿವಾಗದೆ ಮಹಾಕಾವ್ಯವಾಗಿದೆ
ಅದರ ಯಾವ ಎರಡು ಸಾಲು ಬರೆಯಲಿ

ಭೂಮಿಯ ಒಡಲಲ್ಲಿ ಅಡಗಿದ್ದ ಆಶೆಯ ಸೆಲೆ
ನಿನ್ನ ಕಣ್ಣೋಟದ ಶರದಿಂದ ಹೊರಹೊಮ್ಮಿ ಎದುರಾದುದೆಲ್ಲವನ್ನು ಕೊಚ್ಚುತ್ತಾ ಸಾಗಿರುವಾಗ
ಯಾವ ಎರಡು ಟಿಸಿಲುಗಳ ಬಗೆಗೆ ಬರೆಯಲಿ

ಸ್ಪರ್ಶದ ಸಂವೇದನೆಯ ಬಳ್ಳಿ ಚಿಗುರುತ
ಬೆಳೆಯುತ್ತಾ ದೇಹವೆಲ್ಲ ಆವರಿಸಿಕೊಳ್ಳುತ್ತ
ಅಂಗ ಅಂಗಗಳನ್ನು ಸುತ್ತಿಕೊಂಡು ಒತ್ತುತ್ತಿರುವಾಗ ಯಾವ ಎರಡು ಚಿಗುರುಗಳ ಬಗೆಗೆ ಬರೆಯಲಿ

ನೀ ನೀಡಿದ ಗುಲಾಬಿಯ ಕೆಂಪು ಛಾಯೆ
ತನುಮನ ಆವರಿಸುತ್ತ ಮಹಾಜ್ವಾಲೆಯಾಗಿ
ಬಂಡಾಯದ ಗೀತೆ ಹಾಡುತ್ತಿರುವ ಸಂಭ್ರಮ
ಯಾವ ಎರಡು ಸಾಲುಗಳಲ್ಲಿ ಬರೆಯಲಿ


Leave a Reply

Back To Top