ಡಾ. ನಿರ್ಮಲ ಬಟ್ಟಲ ಒಲವು ಬೆಳೆಸಿಕೊಳ್ಳುವುದೆಂದರೆ

ಕಾವ್ಯ ಸಂಗಾತಿ

ಡಾ. ನಿರ್ಮಲ ಬಟ್ಟಲ

ಒಲವು ಬೆಳೆಸಿಕೊಳ್ಳುವುದೆಂದರೆ

.

ಒಲವು ಬೆಳೆಸಿಕೊಳ್ಳುವುದೆಂದರೆ
ಸರಳ ಮಾತಲ್ಲ….

ಮಾತು ಮಾತಲ್ಲಿ ಮಾಧುರ್ಯದ
ಜೇನು ತುಂಬಿ ಸ್ಪೂರಿಸಿ
ಬಯಲಿನೊಳಗೊಂದು
ಮೂರ್ತಿ ರೂಪಿಸಿ
ಮನದೊಳಗೊಂದು
ಭಾವ ಮಂಟಪ ಕಟ್ಟಿದಂತೆ…

ಏಕಾಗ್ರತೆಯಲಿ ಮಂತ್ರ ಜಪಿಸಿ
ಒಲವು ಪೂಜೆ
ಸಾಕಾರಗೊಳಿಸಿಕೊಳ್ಳಲು ಪ್ರೇಮ ಪುಷ್ಪ ಅರ್ಪಿಸಿ
ಜ್ಯೋತಿ ಬೆಳಗಿಸಿಕೊಂಡು
ಅರಿವಿನ ಬೆಳಕ ಅನುಭವಿಸುವಂತೆ

ಗಂಧದ ಕಡ್ಡಿಯ ಒಳಕಿಡಿಯ ಪ್ರೇಮದ ತುಡಿತದ ಪರಿಮಳ
ಮನದಿ ಹದಗೊಂಡ ಭಾವಗಳ ಭಸ್ಮ
ಪೀಚು ಕಾಯಿಯೊಂದು ಫಲಿತು
ಹಣ್ಣಾಗುವವರೆಗೆ ಕಾಯ್ದು ನೈವೇದ್ಯವಿಟ್ಟಂತೆ

ಅಡೆತಡೆಗಳ ಮೀರಿ ಆಸಕ್ತಿ ಕದಡದಲೆ ತೊಡಗಿಸಿಕೊಳ್ಳುತ
ಇರುವುದೆಲ್ಲವ ಮರೆತು
ಸ್ಥಳ ಕಾಲ ಮಿತಿ ಮೀರಿ
ಸದಾಕಾಲ ಧ್ಯಾನಿಸುವ
ಯೋಗಿಯ ತೆರನಂತೆ

ನಿರಂತರ ತಪಸ್ಸಿನಿಂದ ಪಡೆದ ವರ
ಒಲವ ಸನ್ಮಾನ
ಉನ್ಮಾದ ತೊರೆದ ಭಾವಬಂಧನದಿ
ಆತ್ಮ ಸಂಗತ್ಯದ
ನಿಜ ತೃಪ್ತಿ ಸಾಕ್ಷಾತ್ಕಾರಗೊಂಡಂತೆ


8 thoughts on “ಡಾ. ನಿರ್ಮಲ ಬಟ್ಟಲ ಒಲವು ಬೆಳೆಸಿಕೊಳ್ಳುವುದೆಂದರೆ

    1. ಸುಂದರ ಕಾವ್ಯ.
      ಅಭಿನಂದನೆಗಳು ಮೇಡಂ.

    1. ಜೇಡರ ಬಲೆಯಂತೆ
      ನವಿರು
      ನಿಮ್ಮ ಕವಿತೆ

      ತುಂಬಾ ಚೆನ್ನಾಗಿ ಮೂಡಿಬಂದಿದೆ.
      – ಡಾ. ನಾಗೇಂದ್ರ

  1. —– ಸದಾ ಕಾಲ ಧ್ಯಾನಿಸುವ
    ಯೋಗಿಯ ತೆರನಂತೆ
    ಅದ್ಬುತ ಕಾವ್ಯ ರಚನೆ.
    ಅಭಿನಂದನೆಗಳು ಮೆಡಮ್

Leave a Reply

Back To Top