ಕಾವ್ಯ ಸಂಗಾತಿ
ಶಾಂತಾ ಜಯಾನಂದ್
ನನ್ನ ಹಾಡು
ಒಲವ ಧಾರೆಯ ಹೀರಿ
ನಲಿವಾ, ಕಡು ಕೆಂಪುಗುಲಾಬಿ
ಯೇ,
ಕೇಳು
ನನ್ನದೂ ಒಂದು ಹಾಡಿದೆ,
ಸೂರ್ಯ, ರಶ್ಮಿಯ
ಪ್ರೇಮದೋಲೆಯ
ಸ್ವೀಕರಿಸಿ, ಅರಳಿ ನಗುವ
ನೈದಿಲೆಯೇ,
ನನ್ನದೂ ಒಂದು ಹಾಡಿದೆ,
ಒಲವ ತೋಟದ ತುಂಬಾ
ಹಾರುವ, ಹೂಗಳ
ಬಣ್ಣ ನಿರುಕಿಸುವ
ಮಲ್ಲಿಗೆಯ ಸೌರಭವ
ಭರಿಸುವ ಚಿಟ್ಟೆಯೇ,
ನನ್ನದೂ ಒಂದು ಹಾಡಿದೆ,
ಬೇಲಿಯಲ್ಲೇ ಅರಳಿ,
ನೀಲವನ್ನೇ ಹೊದ್ದು
ಮೆದ್ದು ಅರಳಿದ,
ಹೂ ಸುತ್ತ ಸುತ್ತುವ
ದುಂಬಿಯೇ
ಕೇಳು ನನ್ನದೂ ಒಂದು ಹಾಡಿದೆ,
ಕದಪುಗಳಲ್ಲಿ ರಂಗೇರಲಿಲ್ಲ
ಕಣ್ಣುಗಳು ನಕ್ಷತ್ರಗಳಾಗಲಿಲ್ಲ
ಮುಖ ರಮ್ಯತೆಯ
ಅಡಗುತಾಣವಾಗಲಿಲ್ಲ
ಹೃದಯದಲ್ಲಿ
ತುಂಬಿದ ಪ್ರೀತಿಯ
ಭಾವ ಬೊಗಸೆ, ತುಂಬಿ
ತುಂಬಿಕೊಡುವೆ,
ನನ್ನಾಣೆ,
ಕಾಡಿಗೆ ಕಣ್ಣು
ವಜ್ರದ ಮೂಗುತಿಯ
ನತ್ತು,
ಮುಖ ಮುಚ್ಚುವ
ಕೇಶರಾಶಿ
ತುಂಬು ರೆಪ್ಪೆಯ
ಬಾಗಿದ ತುಟಿಗಳ
ಮಾಂಸ, ಮಜ್ಜೆಗಳ
ಮೀರಿದ
ನನ್ನದೂ ಒಂದು ಹಾಡಿದೆ
ಏ ಹುಡುಗ
ನನ್ನದೂ ಒಂದು ಹಾಡಿದೆ.
ತುಂಬಾ ಸೊಗಸಾದ ಸಾಹಿತ್ಯ
Thank you
ಚೆಂದದ ಕವಿತೆ