ವ್ಯಾಲಂಟೈನ್ ವಿಶೇಷ
ಕವಿತಾ ಹಿರೇಮಠ
ಗಝಲ್
ಲೋಕದ ಪರಿವೆಯೇ ಇರಲಿಲ್ಲ ನಿನ್ನ ಪ್ರೇಮ ಪತ್ರ ಓದುವಾಗ
ನನ್ನ ಸಂಭ್ರಮಕ್ಕೆ ಕೊನೆಯಿರಲಿಲ್ಲ ನಿನ್ನ ಪ್ರೇಮ ಪತ್ರ ಓದುವಾಗ
ನನ್ನ ಕಣ್ಣುಗಳು ಊರೆಲ್ಲಾ ಅಲೆದು ನಿನ್ನನೇ ಹುಡುಕುತ್ತಿದ್ದವು
ಬಾಳಿನಲ್ಲಿ ನೋವುಗಳಿರಲಿಲ್ಲ ನಿನ್ನ ಪ್ರೇಮ ಪತ್ರ ಓದುವಾಗ
ಕ್ಷಣ ಕ್ಷಣವೂ ಹೃದಯ ಚಡಪಡಿಸುತ್ತಿತ್ತು ನಿನ್ನ ನೋಡಬಯಸಿ
ಪ್ರಪಂಚದಿ ಬೇರೆನೂ ಬೇಕಿರಲಿಲ್ಲ ನಿನ್ನ ಪ್ರೇಮ ಪತ್ರ ಓದುವಾಗ
ನೀ ಕೊಟ್ಟ ಗಾಜಿನ ಬಳೆಗಳು ಒಡೆದು ಹೋದವು ಗಾಯಗೊಳಿಸಿ
ನಿನ್ನ ಪ್ರೀತಿಯು ಮೋಸವೆನಿಸಲಿಲ್ಲ ನಿನ್ನ ಪ್ರೇಮ ಪತ್ರ ಓದುವಾಗ
ನಿನ್ನ ಬಣ್ಣ ಬಣ್ಣದ ಮಾತುಗಳ ಒಳಸಂಚು ಕವಿಯು ಅರಿಯಲಿಲ್ಲ
ಬರುವ ಅಪವಾದಗಳ ಊಹಿಸಲಿಲ್ಲ ನಿನ್ನ ಪ್ರೇಮ ಪತ್ರ ಓದುವಾಗ