ವ್ಯಾಲಂಟೈನ್ ವಿಶೇಷ
ಪಲ್ಲವಿ ಪ್ರಸನ್ನ.
ಮಿಡಿವ ಶ್ರುತಿ
ಮಿಡಿವ ಬಾಳಿನ ಲಯದ ಶ್ರುತಿಯಲಿ
ಮಧುರ ಗಾನದ ಹೊನಲು
ತುಡಿವ ಬಯಕೆಯ ಒಲವ ಜೊತೆಯಲಿ
ಹೃದಯ ನಿನಗೆ ಮೀಸಲು
ಮನದ ಕನಸಿನ ಮೌನ ಮಾತಲಿ
ಸರಿಸು ಅಂಜಿಕೆ ಬೇಸರ
ನಾದ ಸ್ವರದಲಿ ಲೀನವಾಗಿಸು
ಪ್ರೇಮಲೋಕದ ನೇಸರ
ಎದೆಯ ಪುಸ್ತಕ ತೆರೆದು ನೀನು
ಓದಬೇಕಿದೆ ಒಲವನು
ಸುಧೆಯ ತೆರದಲಿ ಮೊರೆದು ಪ್ರೇಮದಿ
ಮೊಗೆಯಬೇಕಿದೆ ಹಲವನು
ಕಣ್ಣ ಪುಟದಲಿ ಕಾವ್ಯ ಬರೆಯುತ
ಕಾವ್ಯ ಲೋಕದ ಸೋಜಿಗ
ಸಣ್ಣ ಖುಷಿಯಲಿ ಬಣ್ಣ ಕನಸನು
ಮುನ್ನ ಕರೆಸುವ ಈ ಜಗ
ಒಲವ ಹಾಡಿನ ಸವಿಯ ಪಲ್ಲವಿ
ಹೃದಯ ತುಂಬಲಿ ಅನುದಿನ
ಬಲವ ತುಂಬದೆ ನೀನು ಸರಿಯಲು
ಪೂರ್ಣವಾಗದ ಕವನ