ವ್ಯಾಲಂಟೈನ್ ವಿಶೇಷ
ಪ್ರೀತಿ ಸುರಿಸಲಿ ನಿನಗೆ….
ವಿಜಯಶ್ರೀ ಹಾಲಾಡಿ
ಮಳೆಗಾಗಿ ಸದಾ
ಹಾತೊರೆಯುತ್ತಾಳೆ ಭೂಮಿ
ನಿನ್ನ ಗುಂಗಿನೊಳಗೆ
ಬಿಸಿಲು ಮಳೆ ಚಳಿ
ಮರೆಯುತ್ತೇನೆ ನಾನು!
ಅದೊಂದು ದಿನ
ಹೂವುಗಳೇ ಅರಳದಿರಬಹುದು
ಚಿಟ್ಟೆಗಳು ನಿದ್ದೆಯಿಂದೇಳದಿರಬಹುದು
ಕೋಗಿಲೆಗೆ ಗಂಟಲು ಕಟ್ಟಿಕೊಳ್ಳಬಹುದು
ನದಿ ಹರಿಯದಿರಬಹುದು
……
ನನ್ನ ಸ್ವಾರ್ಥವೆಂದರೆ
ನೀನು ನಗುತ್ತಿರಬೇಕು
ಮತ್ತೆ
ಈ ಚಳಿಗಾಲದ ರಾತ್ರಿಗಳು
ಹುಲ್ಲ ಮೇಲಿನ ಇಬ್ಬನಿ
ಒತ್ತಿ ಕುಳಿತ ಹಕ್ಕಿಗಳು
ತಲೆದೂಗುವ ಮಿಠಾಯಿ ಹೂ
ನಿನ್ನನ್ನು ಉಲ್ಲಸಿತವಾಗಿ
ಪೊರೆದುಕೊಳ್ಳಬೇಕು…..
ಮರೆಯಬೇಡ
ವಿಷಾದ ಹೀರಿಬಿಡಲು
ನನ್ನ ತುಟಿಗಳಿವೆ ನಿನಗೆ!
ಸೂರ್ಯ ಚಂದ್ರ ಚುಕ್ಕಿಗಳು
ಹಾರೈಸಲಿ
ಅಳಿಲು ಮೊಲ ಗುಬ್ಬಚ್ಚಿಗಳು
ಪ್ರೀತಿ ಸುರಿಸಲಿ,
ನಿನ್ನ ದಿನಗಳಿಗೆ
ನೆಲದ ಕರುಣೆಯಿರಲಿ
ನನ್ನೊಳಗೆ ತುಂಬಿಕೊಂಡವನೇ
ಪ್ರೀತಿಯವನೇ….
——————-
ವಿಜಯಶ್ರೀ ಎಂ. ಹಾಲಾಡಿ