ವ್ಯಾಲಂಟೈನ್ ವಿಶೇಷ
ನಾಗರೇಖಾ ಗಾಂವಕರ
ಗಮ್ಯದೆಡೆಗೆ ತೋರಿದ ನಡೆ
ಈ ಹಾದಿಯಲ್ಲೇ ನನ್ನ
ಕನಸುಗಳು ತುಂಬಿಕೊಂಡಿದ್ದು..
ಮತ್ತು ಕಳೆದುಹೋದದ್ದು..
ಕನಸಿಗೆ ಕಡ ನೀಡಿದ ಅವನು
ಜೊತೆಯಾದದ್ದು, ಮರೆಯಾದದ್ದು,
ಮರಳಿದ್ದು.
ಎಷ್ಟು ನಡೆದೆನೆಂದೇ ಅರಿವಿಲ್ಲ.
ಪ್ರತಿ ವಿದಾಯದ
ಕೊನೆಗೂ ಒಂದು ಹತಾಶೆ ಇತ್ತೋ
ಹಾಗೇ ಥೇಟ್,,,
ಪ್ರತಿ ಮರಳುವಿಕೆಯ ಕೊನೆಗೆ ಅವನ ಬೆಚ್ಚಗಿನ ವಿಶ್ವಾಸವಿತ್ತು.
ತಾಯಪ್ಪುಗೆಯ ಹಿತವಿತ್ತು.
ಹಾಗಾಗೇ ಬಾಂಧವ್ಯದ ಪುಟದಲ್ಲಿ
ಬಿಟ್ಟಸ್ಥಳ ನುಸುಳಿ ನುಸುಳಿ
ಹೋದರೂ
ಮತ್ತೆ ತುಂಬಿಕೊಂಡಿದ್ದು
ಅವನಿಗಾಗೇ ತೆರೆದ ಬಾಗಿಲು
ಬೆಳಕಿನ ಹೊನಲನ್ನೆ ಮನದೊಳಗೆ
ಸುರಿದಿತ್ತು.
ಅದೆಷ್ಟು ಸಲ ಹೋದನೋ?
ಹೇಳದೇ ಕೇಳದೇ
ಹೋದಾಗಲೆಲ್ಲ ನನ್ನ ನಿಟ್ಟುಸಿರು
ಬೇಯಿಸಿದ ಅನ್ನವೇ
ಆಹಾರವಾಗಿ ಅದುವೇ ಕಸುವಾಗಿ
ನನ್ನೊಳಗೆ ತುಂಬಿಕೊಂಡಿದ್ದು.
ದೂರಬೇಕೆಂದುಕೊಂಡಾಗಲೆಲ್ಲಾ
ಅವನ ಕಣ್ಣಲ್ಲಿ ಮಡುಗಟ್ಟಿದ ದಯೆ
ನನ್ನ ಕಲಕಿದ್ದು,
ದೂರ ಸಮೀಪವಾದದ್ದು
ನಾದವೇ ಜಗವನಾಳುವುದು
ಎಂದನೊಮ್ಮೆ..
ವೇದವೂ, ನಾದವೂ ಎಲ್ಲವೂ
ಸುಳ್ಳು, ಪೊಳ್ಳು, ಜೊಳ್ಳು
ಎಂದ ಮಗದೊಮ್ಮೆ.
ಎಲ್ಲವೂ ಸಹ್ಯ ಅಸಹ್ಯವೆನ್ನುದೇ ಇಲ್ಲ ಎನ್ನುತ್ತಲೇ
ಮರುಗಳಿಗೆಯಲ್ಲೇ
ಆದಿ ಅನಂತದ ದಿವ್ಯತೆಯ ಬುದ್ಧನ
ಬೆನ್ನುಹತ್ತಿದನಿನ್ನೊಮ್ಮೆ.
ಭವ್ಯದ ಹಾದಿಗಳು ಸಿಕ್ಕುವುದು ಸುಲಭವಲ್ಲ
ಸಿಕ್ಕ ಹಾದಿಯ ಹಾಸು
ಸಿಕ್ಕುಗಳ ಹೊದ್ದು ಮಲಗಿದರೂ
ಗಮ್ಯದೆಡೆಗೆ ತೋರಲಿ
ನಂಬಿದ ನೆಲ ಪತನವಾಗದೇ ಇರಲಿ.
ನೈಸ್ ರೇಖಾ
Thank you smitha ⚘️
Very nice