ವ್ಯಾಲಂಟೈನ್ ವಿಶೇಷ
ಅಕ್ಷತಾ ಜಗದೀಶ್
ಪ್ರೀತಿ ಚಿಲುಮೆ
ನಿನ್ನ ಪ್ರೇಮದ ಕಡಲೊಳು
ರತ್ನ ಪರ್ವತವಾದೆ ನಾ…
ಸಾಗರದಂತ ನಿನ್ನ ಪ್ರೀತಿಗೆ
ಮೂಡುತಲಿದೆ ಇಂದು
ನನ್ನೆದೆಯ ಭಾವತರಂಗ…
ಅಲೆಗಳಾಗಿ ಬಂದು
ಚುಂಬಿಸುತಲಿದೆ ಇನಿಯ
ನಿನ್ನ ಪ್ರೀತಿಯ ಕಡಲು…
ಬಾನ ಚಂದಿರನ ಬೆಳದಿಂಗಳು
ದೀವಟಿಗೆಯ ಬೆಳಕಾಗಿ ನಿಂತತಿದೆ
ತೀರ – ಸಾಗರದ ಮಿಲನಕೆ…
ಉಸುಕಿನ ಮೇಲೆ ಗೀಚಿದ ಹೆಸರು
ಮಾಸದೆ ಕಾದಿದೆ ನಿನ್ನ ಅಪ್ಪುಗೆಗೆ..
ಕಾದು ಕುಳಿತಿಹುದು ಅದೋ
ಅಲೆಗಳಾಗಿ ಬರುವ ನರ್ತನಕೆ..
ಸಪ್ತಸಾಗರದಾಚೆ ಕಾಣುತಿಹುದು
ನಿನ್ನದೇ ಹೊಳಪು…
ಅಲೆಗಳ ಪ್ರತಿ ನಡಿಗೆಯಲ್ಲೂ
ನಿನ್ನದೇ ನೆನಪು…
ಅಗಾದ ಕಡಲಿನಂತೆ ಆವರಿಸಿರುವೆ
ನನ್ನ ಮನದಲಿ ನೀ ಇನಿಯ..
ತಾರೆಯಾಗಿ ನಾ ಮಿಂಚಿದರು
ಮರಳಿ ಸೇರುವೆ ನಿನ್ನಲ್ಲಿ
ಪ್ರತಿಬಿಂಬವಾಗಿ ಸನಿಹ..
ಬತ್ತದ ಪ್ರೀತಿ ಇದುವೇ
ಸಮುದ್ರ ಮಂಥನದಿ ದೊರೆತ
ಅಮೃತದಂತೆ…
ನಾ ನಿನ್ನ ಪ್ರೀತಿ ಚಿಲುಮೆ
ಶಾಂತ ಸಾಗರದಲಿ ಅವಿತಿರುವ
ಮೌನದ ಧ್ಯಾನದಂತೆ…..