ಕಾವ್ಯ ಸಂಗಾತಿ
ಧರಣಿ ಉವಾಚ…
ಡಾ ಪ್ರೇಮಾ ಯಾಕೊಳ್ಳಿ
ನೀನು ಉಂಗುರ ಮರೆತುದಕ್ಕೆ
ನನಗೇನೂ ಹಳಹಳಿಕೆಯಿಲ್ಲ ಬಿಡು
ನೀನಿಲ್ಲದೆಯೂ
ಮಗ ಭರತನನ್ನು ಬೆಳೆಸುವ ಅವಕಾಶ
ಸಿಕ್ಕಿತು
ಹೆಣ್ಣೊಬ್ಬಳನ್ನು ಪ್ರೀತಿಸಿ ಉಂಗುರವೊ
ಇನ್ನಾವುದೋ ಮರೆತುದ ನಾಟಕವಾಡಿ
ಹೆಣ್ಣಿಗೆ ಅನ್ಯಾಯ ಮಾಡಬೇಡಪ್ಪ ಎಂದು
ಬುದ್ದಿ ಹೇಳಲು ಅವಕಾಶ ಸಿಕ್ಕಿತು.
ನನ್ನ ಸೌಂದರ್ಯ ಕ್ಕೆ ಮರುಳಾದ ನೀನು
ಮಗಳೊಂದನ್ನು ಕೈಗಿಟ್ಟು ತಂದೆಯ ಜವಾಬ್ದಾರಿಯೂ
ನಿಭಾಯಿಸದೇ ಹೊರಟು ಹೋದುದಕ್ಕೆ ನನಗೇನು
ದುಃಖವಾಗಲಿಲ್ಲ,ನೀನಿಲ್ಲದೆಯೂ ಲೋಕಪೂಜಿತ
ಮಗಳೊಬ್ಬಳನ್ನು ಬೆಳೆಸುವ ಅವಕಾಶ ಸಿಕ್ಕಿತು.
ನೀನು ತುಂಬು ಗರ್ಭಿಣಿಯಾದ ನನ್ನನ್ನು
ಅಗಸನ ಮಾತು ಕೇಳಿ ಕಾಡಿಗಟ್ಟಿದುದಕ್ಕೆ
ನನಗೆ ದುಃಖವಾದರೂ ಲಾಭವೇ ಆಯಿತು,
ಅರಮನೆಯ ಉಸಿರುಗಟ್ಟುವ ಮೌನದ ಹೊರಗೆ
ನಿಶ್ಚಿಂತರಾಗಿ ಬೆಳೆದ ಅವರು ಆಶ್ರಮದ ರೀತಿ ರಿವಾಜು
ಕಲಿತು ನಿನ್ನ ಹೆಸರು ಮೆರೆಸುವ ಮಕ್ಕಳಾದರು..
ಈ ಸುಡುಸುಡುವ ವರ್ತಮಾನದಲ್ಲೂ
ನೀ ಇರದೆ ,ನಿನ್ನ ನೆರಳಿರದೆ ನಾನದೆಷ್ಟೋ ಸಲ
ಸಾಧನೆಯ ತುತ್ತ ತುದಿ ಏರಿದುದಕ್ಕೆ ಸಾವಿರ
ಉದಾಹರಣೆಗಳಿವೆ…
ಆದರೆ ಒಂದೇ ದುಃಖ …
ನನ್ನ ಆ ಸಂತೋಷದ
ತುತ್ತತುದಿಯಲ್ಲಿ ಎಂದೋ ಒಮ್ಮೆ ನನ್ನ ಮೆಚ್ಚಿ ಬೆನ್ನು ಸವರಿದ ಆ ಒಂದು
ಸ್ಪರ್ಶದ ಹಿತವಾದ ಮಧುರ ಗಳಿಗೆಯ
ನೆನೆದು ನಾ ಮರುಗುತ್ತೇನೆ..ದುಃಖಿಯಾಗುತ್ತೇನೆ..
ಮತ್ತದೇ ಆ ಹೊಸ ಸವಾಲಿನ ಗುರಿಯ
ಹೊತ್ತು ಮುಂದೆ ಸಾಗುತ್ತೇನೆ
ಅನಂತ ಧನ್ಯವಾದಗಳು ಸರ್