ಈಶ್ವರಜಿಸಂಪಗಾವಿ -ಗಜ಼ಲ್

ಕಾವ್ಯ ಸಂಗಾತಿ

ಗಜ಼ಲ್

ಈಶ್ವರಜಿಸಂಪಗಾವಿ

ಜಗದ ಸುಂದರತೆಯ ಎರಕ ಕೊರೆದ ರೂಪ ನಿನ್ನದು
ಯುಗದ ಅಂದಕೆ ಕಳೆಗಟ್ಟಿದ ಮಾಟದ ರೂಪ ನಿನ್ನದು

ಆರದಿರಲಿ ಒಲವಿನ ದೀಪ ಮರೆಮಾಡಿರು ಹಸ್ತವನು
ಜಾರದಿರಲಿ ಹಣತೆ ಪರರು ಕರ ಮುಟ್ಟದ ರೂಪ ನಿನ್ನದು

ತನು ಸೋಂಕಿದೆ ನವಿರಾದ ಗಾಳಿ ನವ ಜೋಡಿಗಳೆಡೆಗೆ
ಮನಸಲಿ ಚೆಲುವ ಕನಸಿನ ಬೀಜ ಬಿತ್ತಿದ ರೂಪ ನಿನ್ನದು

ಬೆರಳ ನೆರಳಲಿ ಕುಡಿ ನಂದದಿರಲೆಂದು ಮರೆ ಮಾಡಿದೆ
ಕೊರಳ ಬಳಸಿದೆ ನಲುಮೆಯ ಸ್ಪರ್ಶದ ರೂಪ ನಿನ್ನದು

ನಲ್ಲೆ ನನ್ನತ್ತ ಮುಖ ತಿರುಗಿಸಿ ಎನ್ನದೆಯ ಚರಕ ತಿರುಗಿಸು
ಒಲ್ಲೆ ಎನ್ನದ ಇನಿಯನ ಮಧುರ ಮಿಲನದ ರೂಪ ನಿನ್ನದು

ಏಕಾಂತದಲಿ ತಲ್ಲೀನವಾಗಿವೆ ಹೊಸ ಹಕ್ಕಿಗಳ ಸ್ವಪ್ನಗಳು
ಸುಖಾಂತದಲಿ ಅಂತ್ಯವಾಗುವ ಚಂದದ ರೂಪ ನಿನ್ನದು

ಯುವ ಭಾವಗಳ ಅಂತರಾಳದ ಕಾರಂಜಿ ಪುಟಿದೇಳುತಿದೆ
‘ಈಶ’ನ ಕರೆಗೆ ಓಗೊಡುತ ಎನ್ನಧರ ತಣಿಸಿದ ರೂಪ ನಿನ್ನದು.


Leave a Reply

Back To Top