ಶಂಕರಾನಂದ ಹೆಬ್ಬಾಳ-ಗಝಲ್

ಕಾವ್ಯಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಸ್ವಯಂವರದಿ ಮತ್ಸ್ಯಯಂತ್ರವ ಬೇಧಿಸಿ
ಗೆದ್ದವನು ಮಧ್ಯಮ
ಜಯದ ಹಾದಿಯಲ್ಲಿ ಕೃಷ್ಣನ ಅನುನಯದಿ
ಇದ್ದವನು ಮಧ್ಯಮ

ನಭದಲ್ಲಿ ಮಿನುಗುವ ತಾರೆಯಾಗಿ ಹೊಳೆದೆ
ಧನಂಜಯ
ಸುಭದ್ರಾ ಉಲೂಪಿ ಚಿತ್ರಾಂಗದೆಯರ ಮನ
ಕದ್ದವನು ಮಧ್ಯಮ

ಸಂಬಂಧಕೆ ಬೆಲೆಕೊಟ್ಟು ಅಣ್ಣನ ಆಜ್ಞೆಯಲಿ
ಮುಳುಗಿದವನು ಈತ
ನಂಬಿದವರ ಪೊರೆಯುವ ಹೊಣೆಯ ನಿತ್ಯ
ಹೊದ್ದವನು ಮಧ್ಯಮ

ಸುತ್ತಲೋಕದಿ ಅಜೇಯನಾಗಿ ಮೆರೆದನಲ್ಲ
ಪಾಂಡವರ ಪುತ್ರ
ಹೆತ್ತ ಸುತನೊಂದು ಅರಿವಿಲ್ಲದೆ ಕಲಹಕ್ಕೆ
ಬಿದ್ದವನು ಮಧ್ಯಮ

ಗುರುಶಿರವ ನೆಲಕ್ಕುರುಳಲು ಕಾರಣನಾದನೆಂದು
ಹೇಳಿದನಲ್ಲ ಅಭಿನವ
ಹರನೊಂದಿಗೆ ಪಾಶುಪತಾಸ್ತ್ರಕೆ ಸೆಣಸಿ ವಿಜಯದಿ
ಎದ್ದವನು ಮಧ್ಯಮ


Leave a Reply

Back To Top