ಇಂದಿರಾ ಮೋಟೆಬೆನ್ನೂರ ಕವಿತೆ-ಗಜಲ್

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ.

ಗಜಲ್

ತೇವವಿಲ್ಲದ ಎದೆನೆಲದ ತಾವಿನಲಿ ಹೂವ ಬೆಳೆದವಳು ನನ್ನವ್ವ
ಭಾವವಿಲ್ಲದ ಮನದ ಬಯಲಲಿ ಜೀವ ತಳೆದವಳು ನನ್ನವ್ವ

ತಗ್ಗುದಿಣ್ಣೆಗಳ ದಿಬ್ಬವನೇರಿ ಉಬ್ಬಿನಲಿ ಹಬ್ಬಮಾಡುವಛಲವು
ಬವಣೆಗಳ ಬಾನೆದೆಗೆ ನೇರ ನಗೆ ಕವಣೆ ಬೀಸಿದವಳು ನನ್ನವ್ವ

ಅಡಿಗೆಯರಮನೆ ಗಡಿಗೆಯಲಿ ಆರದ ಮಲ್ಲಿಗೆ ಅಕ್ಷಯ ಪಾತ್ರೆ
ಉಪ್ಪುಕೆನ್ನೆಯ ಸಿಹಿಯಾಗಿಸಿ ತುತ್ತುಣಿಸಿ ತೂಗಿದವಳು ನನ್ನವ್ವ

ಧರೆಗಿಳಿದ ನಕ್ಷತ್ರಗಳ ಕಣ್ಣಾಮುಚ್ಚಾಲೆಯಾಟ ಸೀರೆ ಸೆರಗಿನಲ್ಲಿ
ಹನಿ ಪ್ರೀತಿಯ ಸ್ಪರ್ಶಕೆ ಸ್ವಾತಿ ಮುತ್ತಾಗಿ ಹೊಳೆದವಳು ನನ್ನವ್ವ

ತಿಂಗಳ ಬೆಳದಿಂಗಳ ಬೆಳಕ ಹೊನಲೆಲ್ಲ ಮೊಗಚಂದಿರನಲ್ಲಿ
ಬಿರಿದೆದೆಯಲಿ ಬಿತ್ತಿಪ್ರೀತಿ ಕಳ್ಳುಬಳ್ಳಿಯ ತೇರೆಳೆದವಳು ನನ್ನವ್ವ


Leave a Reply

Back To Top