ಕಾವ್ಯ ಸಂಗಾತಿ
ಅನುರಾಧಾ ಶಿವಪ್ರಕಾಶ್
ಜೀವ – ಭಾವ
ಭಾವ ನೂರಿದೆ ಹೇಗೆ ಅರುಹಲಿ
ಖಾಲಿ ಪುಟವೇ ಕಾಣಿಕೆ/
ಜೀವ ಕಾದಿದೆ ಪ್ರೇಮಾಲಾಪಕೆ
ನನ್ನ ಹೃದಯವೇ ವೇದಿಕೆ /೧/
ಮನದ ಆಳದಿ ಹೆಪ್ಪುಗಟ್ಟಿದೆ
ಮಿಡಿವ ಮನಸಿನ ವೇದನೆ/
ಏಕೆ ಅರಿಯದೆ ಹೋದೆ ಎನ್ನಯ
ಮಧುರ ಪ್ರಣಯದ ಭಾವನೆ /೨/
ಭಾವ ಹಂದರದೊಳಗೆ ಇಣುಕಲು
ಬಣ್ಣದೋಕುಳಿ ಒಳಗಡೆ/
ನಗುವ ಲೇಪವು ಸೋಕಿದಂತಿದೆ
ನೋವು ಕಾಣದು ಹೊರಗಡೆ /೩ /
ಜೊತೆಗೆ ನಡೆಯುವ ಆಸೆ ಹೆಚ್ಚಿದೆ
ಕೈಯ ಬೆಸೆವುದು ಬಲುಹಿತ/
ಕಳೆದು ಹೋಗಿಹ ಸಮಯ ಬಾರದು
ನೆನಪು ಮಾತ್ರವೆ ಶಾಶ್ವತ /೪/
ಮನದ ಮಾತನು ತುಸುವೆ ಆಲಿಸು
ನಿನ್ನ ಹೆಸರನೆ ಉಲಿವುದು
ಎದೆಯ ಆಳದಲೊಮ್ಮೆ ನಿರುಕಿಸು
ನಿನ್ನ ಬಿಂಬವೇ ಕಾಂಬುದು/೫/
ತುಂಬಾ ಆಪ್ತವಾದ ಸಾಲುಗಳು.