ಶರಣಪ್ಪ ತಳ್ಳಿ ಕುಪ್ಪಿಗುಡ್ಡ- ನಾಕು ತಾವಿನ ತಿರುವು

ಕಾವ್ಯ ಸಂಗಾತಿ

ನಾಕು ತಾವಿನ ತಿರುವು

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ನಿರ್ವೀರ್ಯ ಬೆಟ್ಟದ ತುದಿ ನಿಂತು
ಬೀಸುವ ಬಿರುಗಾಳಿಗೆ
ಒಣ ಖಾರ ತೂರಬಾರದು
ಯಾರದೋ ಕಣ್ಢಿಗೆ ತಾಗಿ
ಜಿಹ್ವೆ ಝಲ್ಲೆನ್ನಬಾರದು

ನಿತ್ಯ ಸತ್ತು ಬದುಕುವವರಿಗೆ
ಆಸೆ ಆಮೀಷಗಳ ತೋರಬಾರದು
ಸುಖಾ ಸುಮ್ಮನೆ ನಂಬಿ,
ಕತ್ತಲ ತೆಕ್ಕೆಯಲಿ ಸಿಕ್ಕು
ಸಾವು ನೋವಿನಲಿ ಅವರು ಬಿಕ್ಕುವಂತಾಗಬಾರದು

ಮೌನ ರೋಧನದಲಿ
ದಿನವಿಡೀ ಹಸಿದು
ಅನ್ನಕ್ಕಲೆವ ಕೀತಗಾಯದ
ನಾಯಿಗೆ ಕಲ್ಲೆಸೆಯಬಾರದು
ಪ್ರತಿ ಪ್ರಾಣಿಯ ಶಬ್ದ,ಉಸಿರು
ನೆಲದ ಹೆಜ್ಜೆ ಗುರುತಾಗಿದೆಂಬುದು
ಮರೆಯಬಾರದು

ಅಲ್ಲಲ್ಲಿ ಚಲ್ಲಾಪಿಲ್ಲಿ ಬಿದ್ದ
ಕಾಳುಕಡಿಗಳ ತುಳಿಯಬಾರದು
ನೆತ್ತರು ನೆಂದ ಮಣ್ಣಲ್ಲಿ
ಬೆಳೆದು,
ತಣ್ಣಗೆ ಸಾವು ಬೇಯಿಸಿ
ಕಾಲದೆಣಿಕೆಯಲಿ ನಿಶ್ಯಬ್ದವಾದ ರೈತನ ಮರೆಯಬಾರದು

ಮರ್ಮರ ಬರ್ಬರ ಮನ
ಸುಟ್ಟುಕೊಂಡು, ಮೂಕ ವೇದನೆ ಅನುಭವಿಸುವವರಿಗೆ ಗದರಿಸಬಾರದು
ನಾಳೆಯ ದಿನ…….
ಬಳಲಿಕೆಯ ಆಳವು ಕರಾಳವಾಗಿ ಎಮಗೆ ಮುಳಗಿಸಬಾರದು
ನಾವು-ನಾವೇ……
ನಾಕು ತಾವಿನ ತಿರುವಿನಲಿ
ಹಾದಿಯಿಂದ ಹಾದಿಗೆ
ಮಾನವೀಯತೆಯ ಬದಲಿಸಬಾರದು.


4 thoughts on “ಶರಣಪ್ಪ ತಳ್ಳಿ ಕುಪ್ಪಿಗುಡ್ಡ- ನಾಕು ತಾವಿನ ತಿರುವು

  1. ತಳ್ಳಿ ಅವರ ಕವಿತೆಯನ್ನು ಓದುವುದೇ ಒಂದು ಸೌಭಾಗ್ಯ….ತುಂಬ ಅರ್ಥಗರ್ಭಿತ ಕವನ

  2. ಸಮುಷ್ಟಿ ಭಾವದಲ್ಲಿ ಒಳ್ಳೆಯ ಆಶಯ ಕಾವ್ಯ ಕಟ್ಡಿ ಕೊಟ್ಟಿದ್ದಾರೆ.
    ಶರಣು

Leave a Reply

Back To Top