‘ಜುಗಲ್ ಬಂಧಿ ಗಜಲ್’

ಕಾವ್ಯ ಸಂಗಾತಿ

‘ಜುಗಲ್ ಬಂಧಿ ಗಜಲ್’

ನಯನ. ಜಿ. ಎಸ್.

ವಿಜಯಪ್ರಕಾಶ್ ಸುಳ್ಯ.

ಆದರದಿ ಮಬ್ಬು ಇತ್ತ ನತಿಗೆ ಹಚ್ಚ ಸಿರಿಯ ಆವರಿಸಿ ಸುಷಮೆಯಾಗಿದೆ ಉದಯಾದ್ರಿ
ವಿಹಗಗಳ ಸುಸ್ವರದ ಧ್ವನಿಯ ಆಸ್ವಾದಿಸುತ ಮುದದಿ ಸಾಕಲ್ಯವಾಗಿದೆ ಉದಯಾದ್ರಿ

ಜೀವಗಂಗೆಯ ಉಡಿಯು ಉಣಿಸಿದ ಅಮೃತಕೆ ಮೈದುಂಬಿತು ನೇಸರನ ಸೊಬಗು
ಶೌರಿಯಲಿ ಮಂದೇಹರನು ಜಾಲಾಡುತ ಸಂಭಾವ್ಯದಿ ಸಕ್ಷಮೆಯಾಗಿದೆ ಉದಯಾದ್ರಿ

ಕರಿ ಮುಗಿಲ ಜಾಡಿಸುತ ನೇಪಥ್ಯಕೆ ಚೆಂಬೆಳಗನು ಆಮಂತ್ರಿಸಿಹನು ಚೆಲುವ ಭಾಸ್ಕರ
ಬವರಗಳನು ಬಡಗೊಳಿಸುತ ಚಿಮ್ಮಿದ ಅಂಶುಗಳಲಿ ಉತ್ಕರ್ಷವಾಗಿದೆ ಉದಯಾದ್ರಿ

ಬಿರಿದು ನೆರೆದಿದೆ ಅರ್ತಿಯ ಸೌಂದರ್ಯವು ನಿಶೀಥಕೆ ಸಂದ ಪ್ರಹಾರದ ಬಿಸುಪಿನಲಿ
ರೌರವವ ಶಮಿಸಿ ಉಷೆ ಇತ್ತಿಹ ತೂರ್ಪನಿಯ ತಣ್ಪಿನಲಿ ಹದುಳವಾಗಿದೆ ಉದಯಾದ್ರಿ

ದಿವಾ ಗರ್ಭವನು ಬೆಳಗುತ ಅಂಕುರಿಸಿದ ದೀಧಿತಿಯ ಶೈಶವಕೆ ಕೃತಜ್ಞಳು ‘ನಯನ’
ಪ್ರಫುಲ್ಲ ಕುಂಭಿನಿಯೊಳು ಮೆರೆವ ಪನ್ನಗನ ಶಿರೋ ಮಿಸುನಿಯಾಗಿದೆ ಉದಯಾದ್ರಿ.

****

ನಯನ. ಜಿ. ಎಸ್.

ಸಾದರದಿ ಬೆಳಕ ಹರಿಸಿ ಜೀವ ರಾಶಿಗೆ ಅವನಿಪನ ಅವತರಣವಾಗಿದೆ ಉದಯಾದ್ರಿ
ವಿಸ್ಮಯದ ಆಗರವದು ಉಪಮೆಯಿಲ್ಲದ ವೈಭೋಗಕೆ ರೂಪಕವಾಗಿದೆ ಉದಯಾದ್ರಿ

ತಮವ ನೀಗಿದನು ಆದಿತ್ಯ ಇರುಳ ಉದರವನು ಬಗೆದು ಸಪ್ತಾಶ್ವಗಳ ತೇರಲ್ಲಿ ಕುಳಿತು
ಶುಭ ದಿನಕೆ ಧರೆಯ ಅಗಸೆಗೆ ಹಿಮಮಣಿಯ ಕಟ್ಟಿ ನೀರಾಜನವಾಗಿದೆ ಉದಯಾದ್ರಿ

ಸಹ್ಯವಲ್ಲದ ಶಿಶಿರದಲ್ಲಿ ನಡುಗಿ ಸಹ್ಯಾದ್ರಿಯು ಬಯಸುತ್ತಿತ್ತು ಅಂಶುಹಸ್ತನ ಅಪ್ಪುಗೆ
ಅಂಗೈಸುತಲಿ ಅಂಬರದಿಂದಿಳಿದು ಅದಿತಿಯೊಳಗೆ ಅವಗತವಾಗಿದೆ ಉದಯಾದ್ರಿ

ಪ್ರತಿಕ್ಷಣ ಪ್ರತಿರವಿಸುತಿಹುದು ದಿವಸ್ಪತಿಯ ಅಂತರಂಗದಿ ಪ್ರಣವ ಮಂತ್ರ ಘೋಷ
ಸಾಕಾರಗೊಂಡಿದೆ ಅಘಾಟ ಅನರ್ಘ್ಯವದು ನಭಕೆ ಆಭರಣವಾಗಿದೆ ಉದಯಾದ್ರಿ

ನಿತ್ಯ ನೂತನ ಭಾವ ವರ್ಷದಿ ಹರ್ಷಿಸಿ ಮನವು ಸಜ್ಜಾಗಿದೆ ವಿಜಯದ ಜೈತ್ರಯಾತ್ರೆಗೆ
ನಿಶಿತ ನೋಟದಲಿ ನಿಶೆಯ ಬಿಗುಹನು ಕಳೆದು ವಿರಾಜಮಾನವಾಗಿದೆ ಉದಯಾದ್ರಿ.

***************

ವಿಜಯಪ್ರಕಾಶ್ ಸುಳ್ಯ.

Leave a Reply

Back To Top