ಅಂಕಣ ಬರಹ
ಕ್ಷಿತಿಜ
ಭಾರತಿ ನಲವಡೆ
ಶ್ರದ್ಧೆ
“ಮೇಡಂ ನೀವು ಹೇಳಿದ ಎಲ್ಲ ವಿಷಯಗಳ ನೋಟ್ ಬುಕ್ ಗಳನ್ನು ಅದರೊಂದಿಗೆ ಹೊಸ ಸ್ಕೂಲ್ ಬ್ಯಾಗ್,ಪೆನ್ಸಿಲ್,ಪೆನ್ನುಗಳ ಬಾಕ್ಸನ್ನು ಕೊಡಿಸಿದ್ದೇನೆ.ಟ್ಯೂಷನ್ ಗೂ ಕಳಿಸುತ್ತೇನೆ ಆದರೂ ಇವನು ನಾ ಬಯಸಿದಂತೆ ಅಂಕ ಪಡೆಯುತ್ತಿಲ್ಲ,ಏನು ಮಾಡಬೇಕು ತೋಚದಾಗಿದೆ ನೀವಾದರೂ ಹೇಳಿ”ಎಂದು ತಮ್ಮ ಮಗನ ಕುರಿತು ಪಾಲಕರೊಬ್ಬರು ಬೇಸರದಿಂದ ಗೊಣಗಿಕೊಂಡರು. ಆಗ ಅವರ ಹುಡುಗನನ್ನು ಕರೆದು ವಿಚಾರಿಸಿದಾಗ “ನೋಡು ರತನ್! ನಿನ್ನಪ್ಪ ನಿನಗಾಗಿ ನೀನು ಕೇಳುವ ಮೊದಲೇ ಎಲ್ಲವನ್ನು ಕೊಡಿಸುತ್ತಾರೆ.ಚನ್ನಾಗಿ ಅಭ್ಯಾಸ ಮಾಡಲು ನಿನಗೇನು ತೊಂದರೆ?” ಎಂದು ಕೇಳಿದಾಗ ರತನ್”ನೋಡಿ ಮೇಡಂ ನನ್ನಪ್ಪ ಯಾವಾಗಲೂ ಅಭ್ಯಾಸ ಮಾಡು ಎಂದು ನನಗೆ ಆಟಕ್ಕೂ ಕೂಡ ಬಿಡದೇ ಒತ್ತಾಯ ಮಾಡುತ್ತಾರೆ.” ಎಂದಾಗ ನಾನು ರತನ್ ತಂದೆಯವರಿಗೆ ಮಂತ್ರಕ್ಕೆ ಮಾವಿನಕಾಯಿ ಉದುರದು,ಅಂತೇಯೆ ನೀವು ಅವನೊಂದಿಗೆ ಬರೀ ಅಭ್ಯಾಸದ ವಿಷಯ ಮಾತ್ರ ಚರ್ಚಿಸಿದರೆ ಅವನಿಗೆ ಬೇಸರವಾಗುತ್ತದೆ.ಅವನಿಗೆ ಆಟವಾಡಲು ತುಸು ವೇಳೆ ನೀಡಿ ಯಾಕೆಂದರೆ ಆರೋಗ್ಯಕರವಾದ ದೇಹದಲ್ಲಿ ಮಾತ್ರ ಆರೋಗ್ಯಕರವಾದ ಮನಸಿರಲು ಸಾಧ್ಯ ಆ ಮನಸೇ ಎಲ್ಲದಕೂ ಕಾರಣ ನೀವು ತಿಳಿದಂತೆ ರತನ್ ದಡ್ಡನಲ್ಲ ನೀವು ಹೇಳಿದ್ದನ್ನು ಕೇಳುವ ವಿವೇಕ ಅವನಲ್ಲಿದೆ” ಎಂದು ತಿಳಿಸಿ ಹೇಳಿದೆ. ಇದು ರತನ್ ತಂದೆಯೊಬ್ಬ ವಿಚಾರವಲ್ಲ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳು ಎಲ್ಲರಿಗಿಂತ ಮುಂಚೂಣಿಯಲ್ಲಿರಬೇಕೆಂದು ಬಯಸುವದು ಹೆತ್ತವರ ಬತ್ತದ ಕನಸು. ನಿಜ ಎಲ್ಲದಕ್ಕೂ ಪ್ರಧಾನವಾದ ಮನದಲ್ಲಿ ಅಧ್ಯಯನ ಶೀಲತೆಗೆ ಅವಶ್ಯವಾದ ಶ್ರದ್ಧೆ ಇರಬೇಕೆಂಬುದು ತುಂಬಾ ಮುಖ್ಯ ಈ ಶ್ರದ್ಧೆಯನ್ನು ಬೆಳೆಸುವಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ.
ಒಂದು ಘಳಿಗೆ ವಿಚಾರಿಸಿ ಯಾವುದೇ ಕೆಲಸವನ್ನು ಕಷ್ಟ ಪಟ್ಟು ಮಾಡದೇ ಇಷ್ಟಪಟ್ಟು ಮಾಡಿದಾಗ ಮಾತ್ರ ಅದು ಯಶಸ್ವಿಯಾಗುತ್ತದೆ.ಈ ಯಶಸ್ಸಿಗೆ ಕಾರಣ ಶ್ರದ್ಧೆ.
‘ಶ್ರದ್ಧೆ’ಇದ್ದಲ್ಲಿ ಕೆಲಸದ ಬಗ್ಗೆ ಗೌರವ, ಭಕ್ತಿ ತಾನಾಗಿಯೇ ಬರುತ್ತದೆ. ಶ್ರದ್ಧೆ ಆಸಕ್ತಿಯ ಮೂಲವಾಗಿದೆ. ಬೇಡರ ಬಾಲಕ ಏಕಲವ್ಯ ದ್ರೋಣಾಚಾರ್ಯರ ಆಶೀರ್ವಾದ ಪಡೆದು ಅವರ ಮೂರ್ತಿಯನ್ನು ಮಾಡಿ ತನ್ನೆದುರು ಸಾಕ್ಷಾತ್ದ್ರೋಣಾಚಾರ್ಯರಿದ್ದಾರೆಂಬ ಭಕ್ತಿಭಾವದೊಂದಿಗೆ ಶ್ರದ್ಧೆಯಿಂದ ಬಿಲ್ವಿದ್ಯೆಯನ್ನು ಕಲಿತ. ಶ್ರದ್ಧೆಯು ಪ್ರೀತಿಯಿಂದ ಒಪ್ಪಿ ಹೃದಯದಿಂದ ಅಪ್ಪಿ ಸಂತಸದಿಂದ ಸರಿಯಾಗಿ ಮಾಡಲೇಬೇಕು ಎಂಬ ಛಲಕೆ ಕಾರಣವಾಗುತ್ತದೆ.
ಕೆಲವೊಮ್ಮೆ ಶ್ರದ್ಧೆಯನ್ನು ಅದು ಕೇವಲ ಧರ್ಮಸಂಬಂಧಿಯಾದುದರಿಂದ ಅಂಧಶ್ರದ್ಧೆ ಎಂದು ಅಪಹಾಸ್ಯ ಮಾಡುವುದು ಬುದ್ಧಿವಂತರೆನಿಸಿಕೊಂಡವರ ಚಟವಾಗಿದೆ.ನಮ್ಮ ಆಸೆಆಸಕ್ತಿ ಆಕಾಂಕ್ಷೆಗಳು ಕಾರ್ಯಗತವಾಗಲು,ರೂಪುಗೊಳ್ಳಲು ಶ್ರದ್ಧೆಯೆ ಅಡಿಪಾಯ.ಶ್ರದ್ಧೆ ಒಂದು ಆತ್ಮಗುಣ,ಮನದ ಮಹಾಶಕ್ತಿ.ನಮ್ಮ ಆಯುಷ್ಯ,ಆರೋಗ್ಯ,ಆನಂದ-ಈ ಎಲ್ಲವುಗಳ ಸತ್ಪರಿಣಾಮ ಶತಃಸಿದ್ಧ.ವಿಶ್ವದಲ್ಲಿರುವ ಎಲ್ಲ ರಹಸ್ಯದ ಬಾಗಿಲುಗಳನ್ನು ತೆರೆಯುವ ಕೀಲಿಕೈ ಶ್ರದ್ಧೆ.ನಿಜವಾದ ಶ್ರದ್ಧೆ ಇತ್ತೆಂದರೆ ದಿವ್ಯಜ್ಞಾನವನ್ನು ಪಡೆಯಬಹುದೆಂಬುದು ಭಗವದ್ಗೀತೆಯ ಒಂದು ಉಕ್ತಿ.
ತಲೆತಲಾಂತರದಿಂದ ಓದುಬರಹದ ಗಂಧಗಾಳಿ ಇಲ್ಲದ ಕುಟುಂಬದಿಂದ ಬಂದವನೊಬ್ಬನಿಗೆ ಅಧ್ಯಯನದ ಹೊಸ ಸಾಹಸಕ್ಕೆ ಬೇಕಾಗುವ ಆತ್ಮಶ್ರದ್ಧೆ ಅವನಿಗೆ ಆ ಹೊಸವಾತಾವರಣದಲ್ಲಿ ದೊರೆಯಿತು.ತನ್ನಿಂದ ಓದು ಖಂಡಿತ ಸಾಧ್ಯ ಎನ್ನುವ ಶ್ರದ್ಧೆ ಅವನನ್ನು ಓದಿನಲ್ಲಿ ಮುನ್ನಡೆಯಿಸಿತು.ಅವನ ಪ್ರತಿಭೆಯನ್ನು ಅರಳಿಸಿತು.ಆಂತರ್ಯದ ಆಳದಲ್ಲಿ ಪ್ರತಿಯೊಬ್ಬರಲ್ಲೂ ಇರುವ ಅಪಾರ ಶಕ್ತಿಯನ್ನು ಶ್ರದ್ಧೆ ಎಚ್ಚರಗೊಳಿಸುತ್ತದೆ.
ಬದುಕಿನಲ್ಲಿ ಶ್ರದ್ಧೆ ಇಲ್ಲದಿರಲು ಕಾರಣಗಳು ಹಲವಾರು.ಯಾವಾಗಲೂ ‘ಇಲ್ಲ’ಎನ್ನುವ ಗುಣ ತುಂಬಾ ಅಪಾಯಕಾರಿ.’ನನ್ನಿಂದ ಯಾವುದನ್ನೂ ಮಾಡಲು ಸಾಧ್ಯವಿಲ್ಲ,ನಾನೇನೂ ಮಾಡಲಾರೆ ನನ್ನ ಹತ್ತಿರ ಏನೇನು ಇಲ್ಲ’ಎನ್ನುವ ಅಲ್ಪತನ ,ದೀನಭಾವ ವ್ಯಕ್ತಿಯ ಧೈರ್ಯ,ಸ್ಥೈರ್ಯಗಳನ್ನು ಕುಗ್ಗಿಸಬಹುದು.ಕೈಗೆ ದೊರೆತಾಗ ಸ್ವೀಕರಿಸದೇ ‘ಅಯ್ಯೋ ಕಳೆದು ಹೋಯಿತಲ್ಲ,ಅವಕಾಶ ತಪ್ಪಿತಲ್ಲ’ಎಂಬ ಗೊಣಗಾಟ ಇರುವ ದೃಢತೆಯನ್ನು ಅಲುಗಿಸುತ್ತದೆ.’ಎಲ್ಲ ನನ್ನ ಹಣೆಬರಹ ‘ಎನ್ನುವವರು ಪ್ರತಿಬಾರಿ ತಮ್ಮ ತಪ್ಪನ್ನು ಇನ್ನೆಲ್ಲೋ ಹೊರಿಸಿ ಸದ್ದಿಲ್ಲದೇ ಜಾರಿಕೊಳ್ಳುವ ಆಲೋಚನೆ ಮಾಡುವದುಂಟು.ಹಾಗಾದರೆ ಬದುಕನ್ನು ಶ್ರದ್ಧೆಯಿಂದ ಸಾಗಿಸುವದು ಹೇಗೆ? ಮೊದಲು ಶ್ರದ್ಧೆಯೊಂದಿಗೆ ಜೀವನದಲ್ಲಿ ಆಸಕ್ತಿ ಅಗತ್ಯ,ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡರೆ ಬದುಕಿನ ಅರ್ಥವನ್ನೇ ಕಳೆದುಕೊಂಡಂತೆ.ಸಂಗೀತದಲ್ಲಿ ಆಸಕ್ತಿ ಇರುವವನು ಶ್ರದ್ಧೆಯಿಂದ ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಆತನಿಗೆ ಆ ಕಲೆ ಸಿದ್ಧಿಸುತ್ತದೆ.
ಆಸಕ್ತಿಯ ಊರ್ಜಿತಕ್ಕೆ ಆಲೋಚನೆ ಅತೀ ಅಗತ್ಯ,ನಾವು ಹೇಗೆ ಆಲೋಚಿಸುತ್ತೇವೆಯೋ ಹಾಗೆ ನಮ್ಮ ಆಸಕ್ತಿ ಬಹುಮುಖವಾಗಿ ಬೆಳೆಯುತ್ತದೆ.ಉದರಪೋಷಣೆಗೆ ಸೇವಿಸುವ ಆಹಾರ ಪೌಷ್ಟಕಾಂಶದಿಂದ ಕೂಡಿದ್ದರೆ ಶರೀರದ ಸದೃಢತೆಗೆ ಸಹಕಾರಿಯಷ್ಟೇ.ಅದರಂತೆ ಮಾನಸಿಕ ಸ್ಥೈರ್ಯದ ಪೋಷಣೆಗೆ ಆತ್ಮವಿಶ್ವಾಸ,ಪ್ರೀತಿ ,ಶ್ರದ್ಧೆ ಮುಂತಾದ ಅಮೂರ್ತ ಆಹಾರ ಬೇಕು.ಇವುಗಳನ್ನು ಉತ್ತಮ ಆಲೋಚನೆಗಳಿಂದ ಬೆಳೆಸಿಕೊಳ್ಳಲು ಸಾಧ್ಯ.ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಾವು ಏನನ್ನು ಆಲೋಚಿಸುತ್ತೇವೆ?ಹೇಗೆ ಇರುತ್ತೇವೆ ಎಂಬುದರ ಮೇಲೆ ನಮ್ಮ ಬದುಕು ಅವಲಂಬಿಸಿದೆ.ಶ್ರದ್ಧೆಯ ಚಿಕಿತ್ಸೆ ಎಲ್ಲರಿಗೂ ಬೇಕು.ಬೆಳೆಯುತ್ತಿರುವ ಮಕ್ಕಳಿಗೆ,ಗುರಿ ತಲುಪಲು ವಿಳಂಬವಾದವರಿಗೆ ವಿಶೇಷವಾಗಿ ಬೇಕು.ಎಲ್ಲರೂ ಅದರ ಬಲದಿಂದ ಎತ್ತರವನ್ನು ಏರಬಲ್ಲರು.ಸರ್ವತೋಮುಖವಾದ ಪ್ರಗತಿಹೊಂದಬಲ್ಲರು.ಆದರೆ ಅದನ್ನು ಪಡೆಯಲು ತಾಳ್ಮೆ,ಒಲ್ಮೆ,ಇವುಗಳ ಹೃತ್ಪೂರ್ವಕ ಸಹಕಾರ ಬೇಕು.ಇದರೊಂದಿಗೆ ಪ್ರಶಾಂತವಾತಾವರಣ,ನಿರಂತರ ಸಾನಿಧ್ಯವಿರಬೇಕು.ಇವುಗಳ ಮೂಲಕ ಬಾಲ್ಯದಿಂದಲೇ ಶ್ರದ್ಧೆಯ ಚಿಕಿತ್ಸೆ ಪಡೆಯುವಂತಾದರೆ ವ್ಯಕ್ತಿತ್ವ ಪೂರ್ಣರೀತಿಯಿಂದ ವಿಕಸಿತವಾಗುವ ಸಾಧ್ಯತೆಯಿದೆ ಎಂಬುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ.ಶ್ರದ್ಧೆಇರದೇ ರೈತ ಫಸಲು ಪಡೆಯಲಾರ.ಶ್ರದ್ಧೆ ಇರದೇ ಯಾವುದೇ ವ್ಯಕ್ತಿ ಒಬ್ಬ ಸಾಧಕನಾಗಲಾರ.ಮಹಾನ್ ವ್ಯಕ್ತಿಗಳ ಶ್ರದ್ಧೆಯ ಪರಿಶ್ರಮ ಅವರು ಅಳಿದರೂ ಚಿರಸ್ಥಾಯಿಯಾಗಿ ಅವರ ಹೆಸರು ಹಸಿರಾಗಿ ಅವರ ಯಶೋಗಾಥೆಯನ್ನು ಎಲ್ಲರ ಮನದಲಿ ಶಾಶ್ವತವಾಗಿಸಿ ಸಾಧನೆಗೆ ತೊಡಗಿದವರ ಕನಸಿಗೆ ನೀರೆರೆದು ಪೋಷಿಸುತ್ತ ನನಸಾಗಿಸುವ ಛಲವನ್ನು ಹುಟ್ಟುಹಾಕುತ್ತದೆ
ಈ ನಿಟ್ಟಿನಲ್ಲಿ ಮಕ್ಕಳ ಮನವರಿತು ಅವರ ಆಸಕ್ತಿಯನ್ನು ತಿಳಿದು ಅವರೊಂದಿಗೆ ತುಸು ಸಮಯವನ್ನು ಕಳೆದು ಜೀವನದ ಗುರಿಯನ್ನು ನೆನಪಿಸುತ್ತ ಶ್ರದ್ಧೆಯಿಂದ ಭವಿತವ್ಯದ ಪಥದಿ ನಡೆವಂತೆ ಪ್ರೇರಣೆ ನೀಡುವ ನಡೆನುಡಿಗಳ ಬಗ್ಗೆ ಅರಿವು ಹೆತ್ತವರಾದ ನಮಗೆ ಇರುವದು ಸೂಕ್ತ ಅಲ್ಲವೇ?
ಭಾರತಿ ನಲವಡೆ