ಅಂಬಮ್ಮ ಪ್ರತಾಪ್ ಸಿಂಗ್ ಗಜಲ್

ಕಾವ್ಯ ಸಂಗಾತಿ

ಗಜಲ್

ಅಂಬಮ್ಮ ಪ್ರತಾಪ್ ಸಿಂಗ್

ಬದುಕು ಸುಂದರ ಎನಿಸಿದ್ದು ನಿನ್ನ ನೋಡಿದ ಮೇಲೆ
ನೋವು ನಲಿವಾಗಿ ಬದಲಾಗಿದ್ದು ಜೊತೆ ಸಾಗಿದ ಮೇಲೆ

ಬಿಸಿಲು ಬೆಳದಿಂಗಳಾಗಿ ತಂಪು ಸೂಸುತ್ತಿದೆ ನಿನ್ನ ನೆರಳಿನಲ್ಲಿ
ಇರುಳ ಬೇಗೆ ಕಳೆಯುತ್ತಿದೆ ನಿನ್ನನು ಸೇರಿದ ಮೇಲೆ

ಹಿಮಾಲಯ ಕರಗಿ ಹರಿಯುತ್ತಿದೆ ನಮ್ಮೀ ಬಿಸಿಯಪ್ಪುಗೆಯ ಕಾವಿಗೆ
ಬಿರುಗಾಳಿ ತಂಗಾಳಿಯಾಗಿ ಬೀಸುತ್ತಿದೆ ನೀನು ಕೈಹಿಡಿದ ಮೇಲೆ

ಎಲ್ಲೆಲ್ಲೂ ಗೌಜು ಗದ್ದಲದ ಕರ್ಕಶ ಧ್ವನಿ ಮಾರ್ದನಿಸುತ್ತಿದೆ
ಸಂತೆಯಲ್ಲೂ ನೀರವ ಮೌನ ನಿನ್ನ ಮಾತು ಕೇಳಿದ ಮೇಲೆ

ಬಾಳೊಂದು ಭಾವಗೀತೆ ರಾಗ ಶೃತಿಗಳು ಬೆರೆತಿರಲು ವನಿತಾ
ಜೀವನ ಸುಂದರಕಾಂಡ ನೀನು ಜೊತೆಗೂಡಿದ ಮೇಲೆ.


Leave a Reply

Back To Top