ಭಾರತೀಯ ಚಲನಚಿತ್ರರಂಗದ ನೈಟಿಂಗೇಲ್ ಲತಾ ಮಂಗೇಶಕರ

ವಿಶೇಷ ಸಂಗಾತಿ

ಭಾರತೀಯ ಚಲನಚಿತ್ರರಂಗದ ನೈಟಿಂಗೇಲ್ ಲತಾ ಮಂಗೇಶಕರ


ಪುಣ್ಯಸ್ಮರಣೆಯ ದಿನ

ಲತಾ ಮಂಗೇಶ್ಕರ್ ಅವರ ದೀರ್ಘ ಸಂಗೀತಯಾತ್ರೆಯ ಮಾಹಿತಿಯನ್ನು ಸಂಕ್ಷಿಪ್ತವಾಗಿ ನೀಡುವದು ಕಷ್ಟ. ಅವರನ್ನು ಅರಿಯದ , ಅವರ ಹಾಡು ಕೇಳದ / ಮೆಚ್ಚದ ಭಾರತೀಯ ಚಲನಚಿತ್ರ ರಸಿಕರು ಇರಲಿಕ್ಕಿಲ್ಲ. ಅದೊಂದು ಶಬ್ದಗಳಿಗೆ ಸಿಲುಕದ, ವರ್ಣನೆಗೆ ನಿಲುಕದ ಅಪೂರ್ವ ಪಯಣ. ಅವರ ಹಾಡುಗಳನ್ನು ಇಂದಿಗೂ ಕೇಳುವವರಿದ್ದಾರೆ. ಮುಂದಿನ ಹಲವು ಶತಮಾನಗಳಲ್ಲೂ ಅವರ ಅಭಿಮಾನಿಗಳಿದ್ದೇಇರುತ್ತಾರೆ. ಅದಕ್ಕೇ ಅವರನ್ನು ” ಕ್ವೀನ್ ಆಫ್ ಮೆಲೊಡಿ” / ” ನೈಟಿಂಗೇಲ್ ಆಫ್ ಇಂಡಿಯಾ” ಎಂದು ಕರೆಯುವದು. ಅವರ ಹಾಡುಗಳಲ್ಲಿ ಉತ್ತಮವಾದ ಕೆಲವನ್ನು ಆಯ್ಕೆ ಮಾಡಿ ಎಂದರೆ ಅದು ಅಸಾಧ್ಯವಾದ ಮಾತು. ಆಯ್ಕೆ ಮಾಡಲು ಹೋದರೆ ನೂರಾರು ಅಲ್ಲ, ಸಾವಿರಾರು ಆಯ್ಕೆ ಮಾಡಬೇಕಾದೀತು. ಇದೇನೂ ಅತಿಶಯೋಕ್ತಿ ಅಲ್ಲ.
ಲತಾಜಿ ಅವರಿಗೆ ನಮ್ಮ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ” ಭಾರತ ರತ್ನ, ಪದ್ಮ ಭೂಷಣ, ಪದ್ಮ ವಿಭೂಷಣ , ಫಾಲ್ಕೆ ಪ್ರಶಸ್ತಿ, ಫ್ರಾನ್ಸ್ ದೇಶದ ಪ್ರಶಸ್ತಿ, ರಾಜ್ಯಸಭಾ ಸದಸ್ಯತ್ವದ ಗೌರವ, ೧೫ ಬಂಗಾಲಿ ಚಿತ್ರಗಳ ಪ್ರಶಸ್ತಿ, ಫಿಲ್ಮ್ಫೇರ್ ಪ್ರಶಸ್ತಿಗಳು, ಗೌರವ ಡಾಕ್ಟರೇಟ್ ಗಳು ಇತ್ಯಾದಿ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಗೌರವಗಳು ದೊರಕಿವೆ. ಅವರು ಹಾಡದ ಭಾಷೆಗಳೇ ಇರಲಿಕ್ಕಿಲ್ಲ. ಭಾರತೀಯ ಭಾಷೆಗಳಷ್ಟೇ ಅಲ್ಲ, ವಿದೇಶೀ ಭಾಷೆಗಳಲ್ಲೂ ಹಾಡಿದ್ದಾರೆ. ಭಜನೆ, ಗಜಲ್ ಮತ್ತಿತರ ಪ್ರಕಾರಗಳಲ್ಲೂ ಅವರ ಹಾಡುಗಳ ಅಸಂಖ್ಯಾತ ಧ್ವನಿಮುದ್ರಿಕೆಗಳು , ಸಿಡಿಗಳು ಬಂದಿವೆ.
ಲತಾಜಿ ಹಿನ್ನೆಲೆ ಗಾಯಕರಷ್ಟೇ ಅಲ್ಲ, ಸ್ವತಃ ಚಿತ್ರ ನಿರ್ಮಾಣ ನಿರ್ದೇಶನಗಳನ್ನೂ ಮಾಡಿದ್ದಾರೆ .ಒಂದು ಮರಾಠಿ ಚಿತ್ರ ನಿರ್ದೇಶನ, ನಾಲ್ಕು ಹಿಂದಿ ಚಿತ್ರ ನಿರ್ಮಾಣ ಮಾಡಿರುವ ಅವರು ೨೦೦೧ ರಲ್ಲಿ ಪುಣೆಯಲ್ಲಿ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆ ಸ್ಥಾಪಿಸುವ ಮೂಲಕ ಸಮಾಜ ಸೇವೆಯ ಕೆಲಸವನ್ನೂ ಮಾಡಿದ್ದಾರೆ. ಕಾಶ್ಮೀರದ ಭೂಕಂಪ ಪೀಡಿತರಿಗೆ ನೆರವಾಗಿದ್ದೂ ಉಂಟು.
ಭಾರತ – ಚೀನಾ ಯುದ್ಧದಲ್ಲಿ ಮಡಿದ ಭಾರತೀಯ ವೀರ ಜವಾನರ ತ್ಯಾಗ ಬಲಿದಾನಗಳ ಕುರಿತು ಕವಿ ಪ್ರದೀಪ ಅವರು ಬರೆದ ” ಯೇ ಮೇರೆ ವತನಕೆ ಲೋಗೋ” ಪದ್ಯವನ್ನು ಅವರು ಹಾಡಿದಾಗ ಆಗಿನ ಪ್ರಧಾನಿ ನೆಹರೂ ಅವರೂ ಕಣ್ಣೀರಿಟ್ಟಿದ್ದರು. ಅದು ಇಂದಿಗೂ ಹಾಡಲ್ಪಡುತ್ತಿದೆ.
೧೯೬೭ ರಲ್ಲಿ ಕನ್ನಡದಲ್ಲಿ ಸಂಗೊಳ್ಳಿ ರಾಯಣ್ಣನ ಬಗ್ಗೆ ಸಿನಿಮಾ ತಯಾರಾದಾಗ ಬೆಳಗಾವಿಯ ಕವಿ ಭುಜೇಂದ್ರ ಮಹಿಷವಾಡಿ ಎಂಬವರು ಬರೆದ ” ಬೆಳ್ಳನೆ ಬೆಳಗಾಯಿತು” ಎಂಬ ಪದ್ಯಕ್ಕೆ ಲತಾ ಅವರೇ ದನಿ ನೀಡಿದ್ದು ಇಂದಿಗೂ ಅದು ಬಹಳ ಜನಪ್ರಿಯವಾಗಿದೆ.
ಆಸ್ಸಾಂ ಮತ್ತು ಬಂಗಾಲಿ ಭಾಷಾ ಚಿತ್ರರಂಗಗಳಲ್ಲಿ ಲತಾಜಿ ಅವರದು ಬಹಳ ಜನಪ್ರಿಯ ಹೆಸರು. ನೌಶಾದ್, ಶಂಕರ ಜೈಕಿಶನ್, ಎಸ್. ಡಿ. ಬರ್ಮನ್, ಸಿ. ರಾಮಚಂದ್ರ, ಮದನ ಮೋಹನ , ಲಕ್ಷ್ಮಿಕಾಂತ ಪ್ಯಾರೇಲಾಲ್ ಸಹಿತ ಹೊಸ ಪೀಳಿಗೆಯ ಸಂಗೀತ ನಿರ್ದೇಶಕರತನಕ ಅವರು ೨೦ ಕ್ಕೂ ಹೆಚ್ಚು ನಿರ್ದೇಶಕರ ಹಾಡುಗಳಿಗೆ ದನಿಯಾಗಿದ್ದಾರೆ. ಎಲ್ಲ ಖ್ಯಾತ ಗಾಯಕರೊಂದಿಗೂ ದನಿಗೂಡಿಸಿದ್ದಾರೆ. ಲಕ್ಷ್ಮೀಕಾಂತ ಪ್ಯಾರೇಲಾಲ್ ಜೋಡಿಯೊಂದಕ್ಕಾಗಿಯೇ ಲತಾ ೭೦೦ ಕ್ಕೂ ಹೆಚ್ಚು ಹಾಡು ಹಾಡಿದ್ದಾರೆ. ಬಂಗಾಲಿ ಭಾಷೆಯಲ್ಲಿ ಅವರು ಹಾಡಿದ ಹಾಡುಗಳು ೧೮೫ .
ಮೊದಲೇ ಹೇಳಿದಂತೆ ಲತಾ ಅವರ ಜನಪ್ರಿಯ ಹಾಡುಗಳನ್ನು ಉದಾಹರಿಸುವದು ಕಷ್ಟ. ಸಾವಿರಾರು ಹಾಡುಗಳ ಯಾದಿ ಅದು. ಎಂದೂ ಮರೆಯಲಾಗದ ಹಾಡುಗಳವು.
ಗೈಡ್ ಸಿನೆಮಾದ – ಗಾತಾ ರಹೇ ಮೇರಾ ದಿಲ್, ಅನಪಢ್ ಚಿತ್ರದ ” ಆಪ ಕೀ ನಜರೋನೆ, ಪಾಕೀಜಾ ಚಿತ್ರದ ಚಲ್ತೇ ಚಲ್ತೇ/ ಇನ್ಹಿ ಲೋಗೋನೆ, ಪರಿಚಯ್ ದ ಬೀತಿ ನಾ ಬಿತಾಯಿ, ಸತ್ಯಂ ಶಿವಂ ಸುಂದರಂ, ಶೀಷಾ ಹೊ ಯಾ ದಿಲ್ ಹೋ, ರಂಗೀಲಾ ರೆ, ಪಿಯಾ ಬಿನಾ, ನೈನಾ ಬರಸೆ, ತೇರಿ ಆಂಖೋಂಕೆ ಸಿವಾ, ಆಜಾರೆ ಪರದೇಸಿ, ಪ್ಯಾರ್ ಕಿಯಾತೋ ಡರನಾ ಕ್ಯಾ, ಕಹೀಂ ದೀಪ್ ಜಲೇ ಕಹಿಂ ದಿಲ್……ಎಲ್ಲವನ್ನೂ ನಾವು ಮತ್ತೆ ಮತ್ತೆ ಕೇಳುತ್ತೇವೆ…. ಕೇಳುತ್ತಲೇ ಇರುತ್ತೇವೆ.
ಭಾರತೀಯ ಚಿತ್ರರಂಗಕ್ಕೆ ಲತಾ ಅವರ ಕೊಡುಗೆ ಸರ್ವಶ್ರೇಷ್ಠ ವಾದದ್ದು.

————————————-


ಎಲ್. ಎಸ್. ಶಾಸ್ತ್ರಿ

One thought on “ಭಾರತೀಯ ಚಲನಚಿತ್ರರಂಗದ ನೈಟಿಂಗೇಲ್ ಲತಾ ಮಂಗೇಶಕರ

  1. ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್

Leave a Reply

Back To Top