ದೇವರಾಜ್ ಹುಣಸಿಕಟ್ಟಿ-ಏನೇನು ನಿಷೇಧಿಸುತ್ತಿರಿ,ದೊರೆ

ಕಾವ್ಯ ಸಂಗಾತಿ

ಏನೇನು ನಿಷೇಧಿಸುತ್ತಿರಿ,ದೊರೆ

ದೇವರಾಜ್ ಹುಣಸಿಕಟ್ಟಿ

ರಕ್ತದ ಕಲೆ ಅಂಟಿದ
ಓಣಿಯ ಮೀನಾರು….
ಅರ್ಧ ಸುಟ್ಟು ಕರಕಲಾದ
ಕಿಟಕಿ ಬಾಗಿಲು..
ಅಂಗಳದ ಕಾರು….
ಋತುಗಳುರುಳಿದರೂ
ಅಳಿಯದೆ ಉಳಿದ ಕೆಂಡದುಂಡೆಯಂತಹ
ನೆನಪುಗಳ ಕಾರುಬಾರು…
ಮಾದರೂ ಉಳಿದ ಗಾಯದ ಕಲೆ….!!

ಏನೇನು ನಿಷೇಧಿಸುತ್ತಿರಿ…ದೊರೆ

ಈಗೀಗ…
ತುಂಬು ಗರ್ಭಿಣಿಗೆ ಇರಿದ
ಜಂಗಿಡಿದಿರುವ ಚೂರಿ…
ಎಳೆಯ ಕರುಳ ಕಿತ್ತದುರುಳರ ಕೈಯಲ್ಲಿದ್ದ ತುಕ್ಕಿಡಿದಿರುವ ತಲ್ವಾರ್…
ಕೋರ್ಟ್ ಅಂಗಳದಿ
ಗೆದ್ದಿಲಿಡಿದ ಒಂದಿಷ್ಟು
ತನಿಖೆಯ ವರದಿ….
ಕಲೆಗಳ ಮುಚ್ಚಲೆಂದೇ ಮಾಡಿದ
ರೇಷ್ಮೆ ವಸ್ತ್ರದ ಖರೀದಿ….!!
ಅಳಿಸದ ಇತಿಹಾಸದ ಪಳುವಳಿಕೆ!!

ಯಾವ್ ಯಾವುದಂತ..
ನಿಷೇಧಿಸುತ್ತಿರಿ…..ದೊರೆ

ಮತ್ತೇನನ ನಿಷೇಧಿಸುತ್ತಿರಿ….ದೊರೆ

ಮರ್ಮಾoಗ ಬಗೆದು ಉಂಡವರು…
ಮಾಲೆ ತೊಟ್ಟು ಬಿಡುಗಡೆ ಗೊಳ್ಳುವಾಗ …
ಬೆಂಕಿ ಇಟ್ಟವರು ಕೊಳ್ಳಿಕೊಟ್ಟವರು
ಸನ್ನಡತೆಯ ಶಾಲು ಹೊದ್ದು ಹೊರ ಬರುವಾಗ…..
ಕಣ್ಣ ಕಿತ್ತವರು…ಧರ್ಮದ ಕಣ್ಣೆಂದು ಬೀಗಿ ಕೊಳ್ಳುವಾಗ…

ಏನೇನು ನಿಷೇಧಿಸುತ್ತಿರಿ….ದೊರೆ

ಅಲ್ಲಲ್ಲಿ ಎಲುಬು ಅದುಮಿ ಮೇಲೆದ್ದ
ಟಾರ್ ರಸ್ತೆಗಳು…
ಒಂದಿಷ್ಟು ಚಿಗುರೊಡೆವ ಕನಸುಗಳನ್ನೇ ನೆಲಸಮಗೊಳಿಸಿದ
ಬಹುಮಹಡಿ ಕಟ್ಟಡಗಳು….
ಒಂದಿಷ್ಟು ಫ್ಲೆಕ್ಸ್ ಒಂದಿಷ್ಟು ಬ್ಯಾನರ್
ಇನ್ನೂ ಹೆಚ್ಚoದರೆ ಮುಚ್ಚಿದರೂ
ಬೆಚ್ಚಗೆ ಹನಿದ ಕಂಬನಿಯಿಂದಲೇ
ಒಣಗಿದ ನೆತ್ತರಾರದ ನೆಲ…..!!

ಹೆಚ್ಚೆoದರೆ…..

ನಿನ್ನ ನಿಷೇಧವು..

ಹರಯಕ್ಕೆ ಬಂದ ಹೆಣ್ಣುಮಗಳು
ಮೈ ನೆರೆಯದಿರಲೆಂದು ಹರಕೆ ಹೊತ್ತಂತೆ…..!!


ದೇವರಾಜ್ ಹುಣಸಿಕಟ್ಟಿ

Leave a Reply

Back To Top