ರಮೇಶ ಸಿ ಬನ್ನಿಕೊಪ್ಪ ಹಲಗೇರಿ-ಪಾರ್ಕಿನ ಬೆಂಚುಕಲ್ಲು..

ಕಾವ್ಯ ಸಂಗಾತಿ

ಪಾರ್ಕಿನ ಬೆಂಚುಕಲ್ಲು..

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ನಿಬಿಡ ಜನಸಂದಣಿಯಾಚೆ
ಬಸ್ ಸ್ಟ್ಯಾಂಡ್ ಎದುರು ದೊಡ್ಡದೊಂದು ಪಾರ್ಕ

ಪಾರ್ಕ ನಿರ್ಮಾಣಕ್ಕಿಂತ ಮುಂಚಿನಿಂದಲೂ
ನಾನು ಇಲ್ಲೆ ಇದ್ದೇನೆ
ಹದವಾಗಿ ನೆಲವನು ಸಮತಟ್ಟು ಮಾಡುವಾಗ ನನ್ನ ಕಿತ್ತು
ಮೂಲೆಗೆಸೆದರೂ
ಅಂದಿನಿಂದಲೂ ಇಲ್ಲೆ ವಾಸ..!!

ಧಾರಾಕಾರವಾಗಿ ಸುರಿವ ಮಳೆಗೆ
ಮೈಮನ ನಡುಗುವ
ಕೊರೆಯುವ ಚಳಿಗೆ
ಮುಖ ಕಪ್ಪಿಡುವ
ಸುರಿವ ಬಿಸಿಲಿಗೆ
ನಾನು ಮೂಕ ಸಾಕ್ಷಿ..!!

ನನ್ನ ಸುತ್ತಲಿರುವ
ಬಗೆ ಬಗೆಯ ಹೂಗಳ ಪರಿಮಳ
ನೆಲ ತಬ್ಬಲಿರುವ
ಬಿದಿರು ಕಣಗಿಲೆ ಬೇವುಗಳ ಹಾಸಿದ ನೆರಳು
ಸಮತಟ್ಟಾದ ಹುಲ್ಲುಗಾವಲಿನಲ್ಲಿ ಮನುಷ್ಯರ ಹೆಜ್ಜೆಗುರುತುಗಳು
ತುದಿಯಂಚಲಿ ಚಾಚಿರುವ ಮುಳ್ಳುಪೊದೆಯ ಸಾಲಿನಲ್ಲೂ ಪಿಸುಮಾತುಗಳು

ಊರಿನಿಂದ ಬಂದು ಇಳಿದವರು
ಸಂತೆಗೆ ಬಂದು ದಣಿದವರು
ಕೂಲಿ ಹಮಾಲಿ ಅಣ್ಣಂದಿರು..
ಶಾಲೆಯ ಮಕ್ಕಳು
ಕಾಲೇಜು ಮುಗಿಸಿ ಬಂದ ಪಡ್ಡೆ ಹುಡುಗರ ದಂಡು
ಸಂಜೆಯಾದೊಡೆ ವಾಕಿಂಗ್ ಮಾಡುವ ಹಿರಿಯರ ಹಿಂಡು
ಎಲ್ಲದಕ್ಕೂ ನಾನು ಸಾಕ್ಷಿಯಾಗಿದ್ದೇನೆ..!!

ಯೌವನ ತುಂಬಿದ
ಪ್ರೇಮಿಗಳ ಸರಸ ಸಲ್ಲಾಪದ ಗುಸುಗುಸು ಮಾತುಗಳು
ಅವರ ಪ್ರೀತಿಗೆ ಅಡ್ಡಿಯಾದ ಜಾತಿ ಧರ್ಮದ ತೂತುಗಳು…

ಆಲಿಂಗನ, ಸ್ಪರ್ಶ, ಬಿಸಿಯಪ್ಪುಗೆಯ ಭರವಸೆ ಇಬ್ಬರಿಗೂ..!!

ಆದರೂ…
ಎಷ್ಟೋ ಸಲ

ಮುಸುಕಿನೊಳಗಿನ ಕೆನ್ನೆಯ ಮುತ್ತುಗಳು
ರಕ್ತ ಮೆತ್ತಿಕೊಂಡಿವೆ
ಕೊರಳಿನ ತಾಳಿಗೆ ಕೈಹಾಕಿ ಹರಿದ ಗಳಿಗೆಗಳು ನಾಚಿವೆ
ಪಿಸು ಮಾತುಗಳು ರೋಧನಗೈದಿವೆ…

ಹೌದು ಎಲ್ಲದಕ್ಕೂ ನಾನು ಮಹಾಮೌನಿ..!!

ಅರಳಿದ ಹೂವುಗಳು ಬಾಡಿದವು
ಹಕ್ಕಿಯ ರೆಕ್ಕೆಗಳು ಮುರಿದವು…
ಸೂರ್ಯನು ಪಡುವಣದಲಿ ಬಿಕ್ಕಳಿಸಿ ಅಸ್ತಮಿಸಿದನು..

ಪಾರ್ಕಿನ ಕಲ್ಲು ಬೆಂಚು ನಾನು

ಹೇಳಲು ಲೋಕದ ಕತೆಯು
ಇನ್ನೇನಿದೆ…??


2 thoughts on “ರಮೇಶ ಸಿ ಬನ್ನಿಕೊಪ್ಪ ಹಲಗೇರಿ-ಪಾರ್ಕಿನ ಬೆಂಚುಕಲ್ಲು..

  1. ಒಳ್ಳೆಯ ಭಾವನಾತ್ಮಕ ಕವಿತೆ. ಚೆನ್ನಾಗಿದೆ.ಅಭಿನಂದನೆಗಳು

  2. ಅದ್ಭುತ ಕಲ್ಪನೆ. ಎಲ್ಲರಿಗೂ ಕಲ್ಲಿನ ನಂಟಿದೆ. ಒಂದು ಅತ್ಯುತ್ತಮ ಕವಿತೆ.ಅಭಿನಂದನೆಗಳು ಸರ್

Leave a Reply

Back To Top