ಡಾ. ಪುಷ್ಪಾ ಶಲವಡಿಮಠರವರ-ನಾ ರೊಟ್ಟಿ ತಟ್ಟಬೇಕಿದೆ

ಕಾವ್ಯ ಸಂಗಾತಿ

ನಾ ರೊಟ್ಟಿ ತಟ್ಟಬೇಕಿದೆ

ಡಾ. ಪುಷ್ಪಾ ಶಲವಡಿಮಠ

ಗಂಡ ಬರುವ ಹೊತ್ತಾಯಿತು
ಕಾಡಬೇಡ ಕವಿತೆ
ನಾ ರೊಟ್ಟಿ ತಟ್ಟಬೇಕಿದೆ

ನಿನಗೇನು ಗೊತ್ತು ರೊಟ್ಟಿ ತಟ್ಟುವ ತ್ರಾಸು?!
ಹಿಟ್ಟು ಸಾಣಿಸಿಕೊಳ್ಳಬೇಕು
ಜಿಗುಟು ಹಾಕಿಕೊಳ್ಳಬೇಕು
ನಾದಿಕೊಳ್ಳಬೇಕು
ರೊಟ್ಟಿ ತಟ್ಟಿ ಕಾವಲಿಗೆ ಹಾಕಬೇಕು.

ಇಷ್ಟಕ್ಕೆ ಮುಗಿಯಿತು ಎನ್ನುವೆಯಾ!ಇಲ್ಲಾ
ಮೇಲ್ಪದರಿಗೆ ನೀರು ಹಚ್ಚಬೇಕು
ಹದವಾಗಿ ಬೇಯಿಸಬೇಕು
ಹಸಿದ ಹೊಟ್ಟೆಗೆ ಬಡಿಸಬೇಕು
ಇಷ್ಟೆಲ್ಲಾ ಗಡಿಬಿಡಿ ಇರುವಾಗ
ಕಾಡಬೇಡ ಕವಿತೆ ನನ್ನ ಹತ್ತಿರ ಬಂದು

ಗಡಿಯಾಚೆ ಯುದ್ಧ ನಡೆದಿದೆ
ಅಲ್ಲಿ ಹೋಗು ಯುದ್ಧ ತಡೆಯಲು ಹೋಗು
ನನ್ನ ಮನೆ ಮನ ಶಾಂತವಾಗಿದೆ
ಇಲ್ಲಿ ನಿನಗೆ ಕೆಲಸವಿಲ್ಲ
ಹತ್ತಿ ಉರಿಯುತ್ತಿರುವ
ದ್ವೇಷಾಸೂಯೆಯ ಬೆಂಕಿಯ
ಶಮನಗೊಳಿಸಲು ಅಲ್ಲಿಗೆ ಹೋಗು

ಅಲ್ಲಿ ಯಾರೋ ಅರಚುತ್ತಿದ್ದಾರೆ ಕೇಳಿಸಿಕೋ
ನನ್ನ ಜಾತಿ ಹೆಚ್ಚು ನಾನೇ ಹೆಚ್ಛೆoದು
ಹಣತೆ ಬತ್ತಿ ಎಣ್ಣೆ ಸೇರಿದರೆ ಬೆಳಕೆಂದು
ಸಾರಿ ಸಾರಿ ಹೇಳಲು ಅಲ್ಲಿಗೆ ಹೋಗು
ಎಲ್ಲರೊಂದಾದಾಗ ಬೆಳಕು ಎಂಬುದ
ತಿಳಿಸಲು ಹೋಗು
ಇಲ್ಲಿ ಕಾವಲಿಗೂ ರೊಟ್ಟಿಗೂ ಒಪ್ಪಂದವಾಗಿದೆ
ಹಸಿವಿಗೂ ಹೊಟ್ಟೆಗೂ ಸ್ನೇಹವಾಗಿದೆ

ಅಲ್ಲಿ ನೋಡು ರೈತನ ಕೊರಳು
ನೇಣಿಗೆ ಶರಣಾಗಿದೆ
ಹೋಗು ಅಲ್ಲಿಗೆ ಹೋಗು
ಸಾವಿನ ಹಿಂದಿನ ಸತ್ಯ ಸತ್ತು
ಹೋಗಿದೆ ಎಂದು ತಿಳಿಸು ಹೋಗು
ನನ್ನ ಬೆನ್ನ ಹಿಂದೆ ಸುಳಿಯಬೇಡ
ದೇಶದ ಬೆನ್ನೆಲುಬೇ ಮುರಿಯುತಿದೆ
ಕಾಣುತಿಲ್ಲವೇ ನಿನಗೆ!

ಮಾರುಕಟ್ಟೆಯ ಹಗರಣ ನೋಡು ಹೋಗು
ರಾಜಕೀಯದ ದೊಂಬರಾಟ ನೋಡು ಹೋಗು
ಮುಸುಕಿನ ಗುದ್ದಾಟದ ಪರಿಯ ನೋಡು
ಮುಖವಾಡದ ಹಿಂದಿನ ಸಂಚಿನ ಧಾಳಿ ನೋಡು
ಹೋಗು ಕವಿತೆ ಹೋಗು
ನನ್ನ ಕಾಡುವುದ ಬಿಟ್ಟು ಹೋಗು
ನಾ ರೊಟ್ಟಿ ತಟ್ಟಬೇಕಿದೆ

ಮಾನಹರಣವೋ?!ಮಾರಣಹೋಮವೋ?!
ನನಗೆ ಏನೊಂದು ತಿಳಿಯುತ್ತಿಲ್ಲ ಕವಿತೆ
ನಿನಗೆಲ್ಲವೂ ಗೊತ್ತು
ಬದುಕು ಸುಟ್ಟು ಬೂದಿಯಾಗುವ ಮುನ್ನ
ಹೋಗು ಕವಿತೆ ಮಂಗಲಗೀತೆ ಹಾಡಲು ಹೋಗು
ನನ್ನ ಕಾಡಬೇಡ ಬಿಟ್ಟು ಬಿಡು
ನಾ ರೊಟ್ಟಿ ತಟ್ಟಬೇಕಿದೆ
ನಿನಗೇನು ಗೊತ್ತು ರೊಟ್ಟಿ ತಟ್ಟುವ ತ್ರಾಸು?!


ಡಾ. ಪುಷ್ಪಾ ಶಲವಡಿಮಠ

4 thoughts on “ಡಾ. ಪುಷ್ಪಾ ಶಲವಡಿಮಠರವರ-ನಾ ರೊಟ್ಟಿ ತಟ್ಟಬೇಕಿದೆ

  1. ಮೆಡಮ್ ತಮ್ಮ ರೊಟ್ಟಿ ತಟ್ಚಬೇಕಿದೆ ಕವನ ತುಂಬಾ ಅಥ೯ಪೂಣ೯ವಾಗಿದೆ

  2. ಧನ್ಯವಾದಗಳು ಸರ್ ತಮ್ಮ ಓದಿಗೆ ಮತ್ತು ಅಭಿಪ್ರಾಯಕ್ಕೆ

Leave a Reply

Back To Top