ಕಾವ್ಯಸಂಗಾತಿ
ತೊರೆಯದಿರು ಜೋಗಿ
ಜಯಂತಿ ಸುನಿಲ್
ಎಲ್ಲಾ ಬಿಟ್ಟು ಬಂದೆ ಜೋಗಿ ನಿನ್ನ ಹಿಂದೆ…
ಸೂರಿಲ್ಲದ ಊರೆಡೆಗೆ ನಡೆವೆ ನಿನ್ನ ಬೆನ್ನಾ ಹಿಂದೆ…!!
ನನ್ನ ಪಾಡಿಗೆ ನಾನು ಇದ್ದೆ
ನಾ ಹೇಗೆ ನಿನ್ನ ಕಣ್ಣಿಗೆ ಬಿದ್ದೆ?
ಕಣ್ಣಲ್ಲಿಯೇ ನೀ ಎನ್ನ ಬಂಧಿಸಿದೆ
ಕಲ್ಲುಸಕ್ಕರೆಯಂತೆ ನಾ ಕರಗಿ ಹೋದೆ..!!
ತವರು ಸಿರಿಯನ್ನು ನಾ ತೊರೆದು ಬಂದೆ
ನನ್ನವರನು ಅಗಲಿ ನಾ ಎದ್ದು ಬಂದೆ..
ಖಾಲಿಯಾಗಿ ನಾನು ಬಂದೆ
ಪೂರ್ಣಗೊಳಿಸು ಎನ್ನ ನೀನು ಮುಂದೆ..!!
ನೀ ಕೊಟ್ಟ ಮುತ್ತೇ ನನ್ನ ಒಡವೆ
ನಮಗೇಕೆ ಜೋಗಿ ಈ ಲೋಕದ ಗೊಡವೆ..?
ನಡಿ ನಡಿ ಸಾಗೋಣ ಬಲುದೂರ
ಪ್ರೇಮಪಂತಗಗಳಾಗಿ ಒಲವಿನ ತೋಟಕ್ಕೆ ಲಗ್ಗೆ ಹಾಕೋಣ ಬಾರಾ..!!
ತಿಂಗಳೂರಿನ ಚಂದಮಾಮ ನೀ ನನಗೆ..
ಚಂದದೂರಿನ ಅಂಗಳದಾಗೆ ಕುಣಿಸೋ ದಣಿಯುವವರೆಗೆ
ಹಿಡಿದ ಕೈ ಬಿಡದಿರು ಕೊನೆಯವರೆಗೆ..
ನಾನು ನೀನೆಂಬ ಮಾಯದ ಮುಸುಕು ಸರಿಯುವವರೆಗೆ..!!