ಕಾವ್ಯ ಸಂಗಾತಿ
ತಪ್ಪುಗಳ ಬಿಗಿದಪ್ಪಿಕೊಂಡಾತ
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ನನ್ನ ಬದುಕಿನ ಸ್ವಚ್ಛ ಬಯಲಾಗ
ಪ್ರೀತಿ ತುಂಬಿದ ಎದೆ ತೆರೆದು
ಸದಾ ನನಗೆ ಬೆಂಗಾವಲಾಗಿ ನಿಂತವನು
ಒಲುಮೆ ಭಾಂದವ್ಯದ ಅಚ್ಚೊತ್ತಿ
ನಿಚ್ಚಳಾದ ಬಾಳ ನಿಹಾರಿಕೆಗಳ ಸುರಿದವನು
ಪ್ರತಿರಾತ್ರಿಯು ಬೆಳದಿಂಗಳ ಉಣಿಸಿದವನು…
ಮಲ್ಲಿಗೆಯ ಹೂವು ಮೂಡಿಸಿ
ಪ್ರೀತಿಯ ಒನಪು ಸುರಿಸಿ
ಅದೆಷ್ಟು ನೆನಪುಗಳ ಬಿಸುಪು ಹರಿಸಿ
ದಿನನಿತ್ಯ ಬೆಳದಿಂಗಳ ಉಣಿಸಿದವನು…
ಕಾಡಿ ಬೇಡಿದ ಕೂಸು ಬಿಕ್ಕಿ ಅತ್ತಾಗ
ಸಂಜೆ ರತಿಯ ಒಲವ ಬಣ್ಣದ ಸೆರಗು ಮರೆಮಾಚಿ
ಮೊಲೆಯೂಣಿಸಿ ನಕ್ಕಾಗ
ಮಡಿಲ ಹಸುಕೂಸು ತೃಪ್ತಿಯಲ್ಲಿ ಬಿಗಿದಾಗ
ಪಕ್ಕದಲ್ಲಿ ನಿಂತು ಬೆಳದಿಂಗಳ ಉಣಿಸಿದವನು….
ನನ್ನೆಲ್ಲ ತಪ್ಪುಗಳ ಬಿಗಿದಪ್ಪಿಕೊಂಡಾತ
ಗಟ್ಟಿಗೊಂಡಿತು ಬಾಂಧವ್ಯ
ಬೆಳಗಿತು ಆತ್ಮ ಸಾಂಗತ್ಯ
ಸಂಧಿ ಕಾಲದಲ್ಲೂ ಜೊತೆ ಇದ್ದುಕೊಂಡು
ಬೆಳದಿಂಗಳ ಉಣಿಸಿದವನು…
ಜೀವಗಳು ಬೆರೆತಾಯ್ತು
ಮನಸುಗಳು ಹೊಸದಾಯಿತು
ನೀನಿತ್ತ ಜೀವ ಅರಳಿ ಹೂವಾಯಿತು
ಕಿರಣ ಅಂಕುರಿಸಿ ಬೆಳಕು ಪಸರಿಸಿ ಎಲ್ಲೆಡೆ
ಎದೆಯಲ್ಲಿ ನೀ ನಿಂತು ಬೆಳದಿಂಗಳ ಸುರಿದವನು….