ಅಂಕಣಲೋಕದ ಮಾನ ಎತ್ತರಿಸಿದ ಹಾ. ಮಾ. ನಾಯಕ್

ವಿಶೇಷ ಲೇಖನ

ಅಂಕಣಲೋಕದ ಮಾನ ಎತ್ತರಿಸಿದ

ಹಾ. ಮಾ. ನಾಯಕ್

ತಟ್ಟನೇ ಸೆಳೆದುಕೊಳ್ಳುವ ಆಕರ್ಷಕ ವ್ಯಕ್ತಿತ್ವ. ಅಷ್ಟೇ ಸ್ನೇಹಪರ ವರ್ತನೆ. ಸೌಜನ್ಯದ ಮಾತು. ಸಾಹಿತ್ಯದ ಕುರಿತು ಅಗಾಧ ಪ್ರೀತಿ. ಸಾಹಿತ್ಯಾಸಕ್ತರ ಕುರಿತು ಅಪಾರ ವಾತ್ಸಲ್ಯ.
ಹಾ. ಮಾ. ನಾ. ಎಂದೇ ಸಾಹಿತ್ಯಲೋಕದಲ್ಲಿ ಪ್ರಸಿದ್ಧರಾದ ಹಾರೋಗದ್ದೆ ಮಾನಪ್ಪ‌ ನಾಯಕರೆಂದರೆ ಬೆಲ್ಲದ ಉಂಡೆ ಇದ್ದ ಹಾಗೆ. ಅವರಿದ್ದಲ್ಲಿ ಸಾಹಿತ್ಯಪ್ರೇಮಿಗಳು ಮುತ್ತಿಕೊಳ್ಳುತ್ತಿದ್ದರು. ಅವರೊಡನೆ ಮಾತನಾಡಿ, ಫೋಟೋ ತೆಗೆಸಿಕೊಂಡು, ಆಟೋಗ್ರಾಫ್ ಹಾಕಿಸಿಕೊಂಡು ಸಂತೋಷ ಪಡುತ್ತಿದ್ದ ಯುವ ಪೀಳಿಗೆಯ ಬರೆಹಗಾರರ ಸಂತೋಷವನ್ನು ನೋಡುವದೇ ಒಂದು ಸೊಗಸು,!
ಹಾಗಿದ್ದರು ಹಾಮಾನಾ. ಸಾಹಿತ್ಯ ಸಮ್ಮೇಳನಗಳಿಗೆ ಯಾವ ಆಮಂತ್ರಣ ಇಲ್ಲದಿದ್ದರೂ ಅವರು ಅಲ್ಲಿ ಹಾಜರಿರುತ್ತಿದ್ದರು. ಮೂರೂ ದಿನ ಇದ್ದು ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತ ಎಲ್ಲರೊಡನೆ ಬೆರೆತು ಅಲೆದಾಡುತ್ತಿದ್ದರು. ಕನ್ನಡದಲ್ಲಿ ಬಹುಶಃ ಯಾವ ಸಾಹಿತಿಗೂ ಸಿಗದೇ ಇದ್ದಷ್ಟು ಪ್ರೀತಿ ಅವರಿಗೆ ಸಿಕ್ಕಿದ್ದು ಅದೇ ಕಾರಣದಿಂದ.


ಕನ್ನಡ‌ ಪತ್ರಿಕೆಗಳ ಅಂಕಣಗಳಿಗೆ ಮಹತ್ವ ತಂದುಕೊಟ್ಟು ಅಂಕಣಕಾರರ ಮಾನ ಹೆಚ್ಚಿಸಿದವರೇ ಹಾಮಾನಾ. ಅವರು ಬರೆದಷ್ಟು ಅಂಕಣಗಳನ್ನು ಬೇರೆ ಯಾರೂ ಬರೆದಂತಿಲ್ಲ. ನಾಡಿನ ಪ್ರಮುಖ ಪತ್ರಿಕೆಗಳಲ್ಲೆಲ್ಲ ಅವರ ಅಂಕಣಗಳು ಇದ್ದೇಇರುತ್ತಿದ್ದವು. ಅವು, ಸಂಪ್ರತಿ, ಸಂಚಯ, ಸಂಪದ, ಸೂಲಂಕಿ, ಸಂಪುಟ ಎಂಬ ಐದು ಪ್ರತ್ಯೇಕ ಪುಸ್ತಕಗಳಾಗಿ ಪ್ರಕಟಗೊಂಡಿವೆ.
೧೯೩೧ ರ ಸೆ. ೧೨ ರಂದು ತೀರ್ಥಹಳ್ಳಿ ತಾಲೂಕಿನ ಹಾರೋಗದ್ದೆಯಲ್ಲಿ ಜನಿಸಿದ ಮಾನಪ್ಪ ನಾಯಕರು ಭಾಷಾ ವಿಜ್ಞಾನದಲ್ಲಿ ಕೊಲ್ಕತ್ತಾ ವಿವಿಯಿಂದ ಪದವಿ ಪಡೆದವರಲ್ಲದೆ ಫುಲ್ಬ್ರೈಟ್ ವಿದ್ಯಾರ್ಥಿವೇತನದೊಂದಿಗೆ ಅಮೆರಿಕಾದ ಇಂಡಿಯಾನಾ ವಿವಿ ಯಲ್ಲಿ ಡಾಕ್ಟರೇಟ್ ಪದವಿ ಪಡೆದರು. ” ಕನ್ನಡ ಸಾಹಿತ್ಯ ಮತ್ತು ಆಡುಭಾಷೆ” ಅವರ ಮಹಾಪ್ರಬಂಧದ ವಿಷಯ. ಕೆಲ ಕಾಲ ತುಮಕೂರು, ಶಿವಮೊಗ್ಗಾಗಳಲ್ಲಿ ಅಧ್ಯಾಪಕ ವೃತ್ತಿ ನಡೆಸಿ ನಂತರ ೧೯೬೧ ರಲ್ಲಿ ಮೈಸೂರು ವಿ. ವಿ. ಸೇರಿ ಪ್ರಾಧ್ಯಾಪಕರಾಗಿ, ೧೬ ವರ್ಷ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾಗಿ ಕುವೆಂಪು, ದೇಜಗೌ, ಸಿಪಿಕೆ, ಪ್ರಭುಶಂಕರ ಮೊದಲಾದವರ ಒಡನಾಟ ಪಡೆದದ್ದಲ್ಲದೇ ೮೪ ರಲ್ಲಿ ಗುಲಬರ್ಗಾ ವಿ. ವಿ. ಕುಲಪತಿಯಾಗಿ ಕಾರ್ಯ ನಿರ್ವಹಿಸಿದರು.
ಅಂಕಣ ಬರೆಹಗಾರರಾಗಿ ತಾರಾಮೌಲ್ಯ ಪಡೆದುಕೊಂಡ ಹಾಮಾನಾ ಅವರನ್ನು ಶಿವರಾಮ ಕಾರಂತರಂಥವರು ” ಹಾಮಾನಾ ಕನ್ನಡದ ಮಾನದಂಡ” ಎಂದರೆ ಡಾ. ವಿವೇಕ ರೈ ಅವರು ” ಕನ್ನಡದ ಮಾನ ಎತ್ತರಿಸಿದ ಹಾಮಾನಾ ” ಎಂದು ಬಣ್ಣಿಸಿದರು. ಕನ್ನಡ ಸಾಹಿತ್ಯ ಚರಿತ್ರೆಯ ಐದು ಸಂಪುಟಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆ. ಇದಲ್ಲದೇ ನಮ್ಮ ಮನೆಯ ದೀಪ, ಬಾಳ್ನೋಟ, ಹಲವು ಜೀವನ ಚರಿತ್ರೆಗಳು, ಹಾವು ಮತ್ತು ಹೆಣ್ಣು ಎಂಬ ಕಥಾಸಂಕಲನ, ಕಾವ್ಯ ಸಂಚಯ, ವಿಜ್ಞಾನ ಸಾಹಿತ್ಯ ನಿರ್ಮಾಣ ಮೊದಲಾದ ಕೃತಿಗಳನ್ನೂ ಅವರು ನೀಡಿದ್ದಾರೆ.
೧೯೮೫ ರಲ್ಲಿ ಬೀದರದಲ್ಲಿ ನಡೆದ ೫೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರದಾಗಿತ್ತು. ಅವರ ಸಂಪ್ರತಿ ಅಂಕಣ ಬರೆಹಗಳ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಗೌರವಗಳು ದೊರಕಿವೆ.
ಪ್ರಶಸ್ತಿ ಗೌರವಗಳೇನೇ ಇರಲಿ, ಅವರು ಜನರ ಅಪಾರ ಪ್ರೀತಿ ಗಳಿಸಿದ ಸಾಹಿತಿಯಾಗಿದ್ದರು. ಅಂಥವರು ಕನ್ನಡದಲ್ಲಿ ಬಹಳ ಅಪರೂಪ!
ಬೇಸರದ ಸಂಗತಿ ಎಂದರೆ ೨೦೦೦ ಇಸ್ವಿಯಲ್ಲಿ ಹಾಮಾನಾ ನಿಧನ ಹೊಂದಿದ ನಂತರ ಅವರ ಪತ್ನಿ ಶ್ರೀಮತಿ ಯಶೋದಮ್ಮ ಅವರು ೨೦೦೪ ರಲ್ಲಿ ಒಬ್ಬಂಟಿತನದ ಬದುಕು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡರು.

—————–


ಎಲ್. ಎಸ್. ಶಾಸ್ತ್ರಿ

Leave a Reply

Back To Top