ಮೆಮರಿ-ಸಾಕ್ಷಿ ಶ್ರೀಕಾಂತ ತಿಕೋಟಿಕರ.

ಹಾಸ್ಯ ಬರಹ

ಸಾಕ್ಷಿ ಶ್ರೀಕಾಂತ ತಿಕೋಟಿಕರ.

ಮೆಮರಿ

ಮದುವೆಗೆ ಹೋಗಿ ಬಂದ ಹೆಂಡತಿ ತಲೆ ಕೆರೆಯುತ್ತಾ “ರೀ ರೀ… “

” ಹೇಳು ಏನು!? “

” ರೀ ನಿನ್ನೆ ಮದುವೆಗೆ ಹೋಗಿದ್ವೀ ಅಲ್ಲಾ!? “

” ಏನೀಗ ಅದಕ್ಕೆ “

” ಏನಿಲ್ಲ ದೀಪಾ… ಅಂತ ಯಾರ ಭೇಟಿ ಆಗಿದ್ದರೂ ನೆನಪ ಆಗವಲ್ಲತು, ಫ್ರೆಂಡ ರಿಕ್ವೆಸ್ಟ್ ಬಂದದ”

” ಹೋ ಆಕಿನ…. ಕೆಂಪು ಸೀರಿ ಉಟಕೊಂಡ ಬಂದಿದ್ದಳು”

” ಅಷ್ಟು ನೆನಪ ಬರವಲ್ಲತು ಬಿಡಿಸಿ ಹೇಳಿ”

” ಏ ಕೆಂಪು ಸೀರಿ, ಗಿಳಿ ಹಸಿರು ಬ್ಲೌಜ … ಸ್ಲೀವಲೆಸ ಹಾಕೊಂಡಿದ್ದಳು! “

” ಯಾರ್ರೀ!? “

” ಏ ಕೂದಲ ಭುಜದ ತನ ಕಟ ಮಾಡಿಸಿದ್ದಳು, ನಕ್ಕರ ಗುಳಿ ಬೀಳತಿದ್ವುಗಲ್ಲಕೆ !! “

” ಛೇ! ನೆನಪ ಆಗವಲ್ಲತು!  ರೀ”

” ಏ ಸ್ವಲ್ಪ ನೆನಪು ಮಾಡಿಕೋ, ಮೂಗಿಗೆ ಸಣ್ಣ ಒಂಟಿಹರಳು ರಿಂಗ ಇಟಕೊಂಡಿದ್ದಳು. ಒಂದು ಕೈಗೆ ಬಹಳಷ್ಟು ಬಳಿ ಮತ್ತು ಒಂದು ಕೈಗೆ ಬರೀ ವಾಚ ಕಟ್ಟಿದ್ದರು! “

” ಯಾರ ರೀ… ಎಷ್ಟು ನೆನಪು ಮಾಡಕೊಂಡರು ಮುಖ ನೆನಪ ಆಗವಲ್ಲತು!  ಮುಖ ಹೆಂಗಿತ್ತು”

” ಲೇ.. ನೀಟ ಮೂಗ ಇತ್ತು. ಗಲ್ಲದ ಮ್ಯಾಲೆ ಸಣ್ಣ ಚಿಕ್ಕಿ ಇತ್ತು, !! “

” ಹೌದಾ!! ಸಿಂಪಲ ಇದ್ದಳೋ ಬಹಳ ಮೇಕಪ್ಪ ಹಾಕಿದ್ದಳೋ!? ರೀ.. “

” ಸಿಂಪಲ ಏನಿಲ್ಲ ಸ್ವಲ್ಪ ಲೈಟಾಗಿ ಮೇಕಪ ಮಾಡಿದ್ದಳು, ತಿಳಿ ಗುಲಾಬಿ ಲಿಪ್ಸ್ಟಿಕ್ ಮತ್ತು ಕಾಡಿಗೆ ಹಚ್ಚಿದ್ದಳು,ಸ್ವಲ್ಪ ಮಾಡ ಇದ್ದಳು. ಪಿಂಕ ಹರಳಿನ ಟಿಕಳಿ (  ಬಿಂದಿ) ಹಚ್ಚಿದ್ದಳು. ನಿನ್ನ ಕೈ ಕುಲಕಿ ಮಾತಾಡಿದಳು…. ಬ್ಲಾಕ್ ಪರ್ಸ ಹಿಡಕೊಂಡಿದ್ದಳು”

” ಛೇ!! ಒಂಚೂರು ನೆನಪ ಬರವಲ್ಲತು ನನಗ! ! ವನಿತಾ ಏನು!? “

” ಏ ಹೋಗ!! ಆಕಿ ಅಲ್ಲ, ಆಕಿ ಡೊಣ್ಣ ಮೂಗಿನ ವನಿತಾ ಆಕಿ ಹಸಿರು ಸೀರಿ ಉಟ್ಟಿದ್ದಳು ಆಕಿ ಬ್ಯಾರೆ, ಇಕಿ ಬ್ಯಾರೆ! “

”  ಎಷ್ಟರ ನೆನಪಿರತದ ನಿಮಗ ನಾ ಮರಗುಳಿ ನೋಡಿರಿ… ನೆನಪಿನ ಶಕ್ತಿ ಭಾಳ ನಿಮಗ”

” ಹೌದೌದು! ಸ್ಕೂಲನ್ಯಾಗ ಒಂದಸಲ ಪಾಠ ಮಾಡಿದರ ಸಾಕ ಬರೀ ನೆನಪಿಟಕೊಂಡ ಬರೀತಿದ್ದೆ ಪರೀಕ್ಷೆ!!ಎಲ್ಲಾರಹಂಗ ರಾತ್ರಿ, ಬೆಳಗ್ಗೆ ಮುಂಜಾನೆ ತಾಸತಾಸಗಟ್ಟಲೇ ಕೂತು ಓದತಿರಲಿಲ್ಲ, ಆದರೂ 90 ಪರ್ಸೆಂಟ್ ಮಾಡತಿದ್ದೆ”

” ಹೌದಾ!! ಆ ಪರಿ ಮೆಮರಿ ಪಾವರ ನಿಮಗ!! ಗ್ರೇಟ ಬಿಡರೀ,”

” ಹ್ಮುಂ ಮತ್ತ ನಿನ್ನಹಂಗ ಅನಕೊಂಡಿ ಏನು, ಸ್ಕೂಲನ್ಯಾಗ ಮಾಸ್ತರ ಎಲ್ಲಾ… ನನಗ ಅವನ ತಲಿ ನೋಡ್ರೀ ಪ್ರಿಂಟಿಂಗ್ ಮಶೀನ ಇದ್ದಂಗ ಒಮ್ಮೆ ಓದಿದರ ಸಾಕು ತಲಿಯೊಳಗ ಅಚ್ಚು ಹಾಕಿದಾಗ ಅಂತಿದ್ರು,ದೋಸ್ತರಂತು ನಿನ್ನ ಕಣ್ಣ ಅಲ್ಲ ಬಿಡು ಅವು ಕ್ಯಾಮೆರಾ ಅಂತಿದ್ರು… ಗೊತ್ತೇನು ನಿನಗ”

” ಏ ನೀವು ಇಷ್ಟ ಫೇಮಸ್ ಅಂತ ಗೊತ್ತಿಲ್ಲ!! “

” ಮತ್ತ ನನ್ನ ಅಂದರ ಏನು ಅನಕೊಂಡಿ, ನನ್ನ ಕಣ್ಣು ಕ್ಯಾಮರಕಿಂತ ಫಾಸ್ಟ್ ಹಿಂಗ ಒಮ್ಮೆ ನೋಡಿ ಕ್ಲಿಕ್ ಮಾಡಕೊಂಡರ ಸಾಕು ಬ್ರೇನ ಒಳಗ ಪ್ರಿಂಟ! !ಕಂಪ್ಯೂಟರ್ ಮೆಮರಿ ಇದ್ದಂಗ!!! ತಿಳಿಕೋ!! “

” ನೀವು ಭಾರೀ ಬಿಡರೀ!! ಗ್ರೇಟ!! ” ( ಎಷ್ಟೋ ವರುಷಗಳ ನಂತರ ನನ್ನ ಹೊಗಳಿಕೆ ಕೇಳುವ ಅಹೋ ಭಾಗ್ಯ, ಎಂತಹ ಸಂತಸ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ… ಆ ಭಾವ)

ಸಂಪೂರ್ಣ ಗರ್ವದಿಂದ ಇಮ್ಮಡಿಸಿದೆ

” ಅಂದಂಗ ನಿಮ್ಮ ನೆನಪಿನ ಶಕ್ತಿ ಬಹಳ, ಕಂಪ್ಯೂಟರ್ ಬ್ರೇನ,… ನನ್ನ ವಜ್ರ ದ ಮೂಗಬಟ್ಟು ಸಿಗ್ತಾ ಇಲ್ಲ, ನಿನ್ನೆ ನಾ ಮದುವೆಗೆ ಹಾಕಿಕೊಂಡು ಬಂದಿದೆನೋ!ಇಲ್ಲೋ !?ನೆನಪು ಆಗ್ತಾ ಇಲ್ಲ,… ಮೂಗಬಟ್ಟು ನಿನ್ನೆ ಹಾಕಿದ್ದೆನೋ ಇಲ್ಲೋ ಕರೆಕ್ಟ್ ಹೇಳರಿ ಕ್ಯಾಮರಾ ಕಣ್ಣಿನಿಂದ, ಇಲ್ಲಂದರ ನಿಮ್ಮ ಕ್ಯಾಮೆರಾದಾಗಿನ ಲೆನ್ಸ್ ಮತ್ತು ಕಂಪ್ಯೂಟರ್ ಬ್ರೇನ ನಿಂದ ಮದರ ಬೋರ್ಡ್ ಎರಡೂ ಕಿತ್ತು ಕೈಯಾಗ ಕೊಡತೀನಿ, ತಿಳೀತಿಲ್ಲೋ… ಅಂದಂಗ ಆ ಡೌಲಗಿತ್ತಿ ದೀಪಾ ಯಾರಂತ ನನಗ ಗೊತ್ತ!! ಹಂಗ ದೇವರು ನಿಮಗೆ ಬರೀ ಮೆಮೋರಿ ಪಾವರ ಕೊಟ್ಟಾನ!! ನನಗ ಪಾವರ ಹೆಂಗ ಉಪಯೋಗಿಸಬೇಕೆಂದು ಬುದ್ಧಿ ಕೊಟ್ಟಾನ,… ಲಟ್ಟಣಿ ತರೂದರಾಗ ಉತ್ತರ ಹೇಳರೀ”..

ನಾನು ಈಗ ಮೆಮರಿ ಕಳಕೊಂಡ ಆಸ್ಪತ್ರೆಗೆ ಹೋಗೋ ತಯಾರಿ ನಡಸೇನಿ.


One thought on “ಮೆಮರಿ-ಸಾಕ್ಷಿ ಶ್ರೀಕಾಂತ ತಿಕೋಟಿಕರ.

Leave a Reply

Back To Top