ಕಾವ್ಯ ಸಂಗಾತಿ
ಸಿಯಾಸಿ ಗಜಲ್
ಅರ್ಚನಾ ಯಳಬೇರು
ಮತೀಯ ಗಲಭೆಗಳಲಿ ಸಿಲುಕಿ ನಲುಗದಿರಲಿ ನನ್ನ ಕನಸಿನ ಭಾರತ
ಅಖಂಡತೆಯ ಹಾದಿಯಲಿ ನಿತ್ಯ ನರಳದಿರಲಿ ನನ್ನ ಕನಸಿನ ಭಾರತ
ಮೊಳಗಲಿ ಐಕ್ಯತೆಯ ಮಂತ್ರ ಸದಾ ಹರಿವ ರುದಿರದ ಕಣಕಣದಲಿ
ಜಾತಿಗಳ ಶೃಂಕಲೆಯಲಿ ಬಂಧಿಯಾಗದಿರಲಿ ನನ್ನ ಕನಸಿನ ಭಾರತ
ಮೂಡಲಿ ಸಹೋದರತ್ವದ ಭಾವ ಸರ್ವ ಧರ್ಮಗಳ ಸಮನ್ವಯದಲಿ
ಸಬಲೀಕರಣದಲಿ ಸದ್ದಿಲ್ಲದೆ ಸೆಡ್ಡುಹೊಡೆಯಲಿ ನನ್ನ ಕನಸಿನ ಭಾರತ
ಕಿತ್ತು ತಿನ್ನುವ ಬಡತನದಲ್ಲೂ ಭರವಸೆಯ ಬೀಜ ಬಿತ್ತುವವರು ನಾವು
ಅನ್ಯಾಯದಲ್ಲೇ ನ್ಯಾಯದ ಕೊಲೆ ಗೈಯದಿರಲಿ ನನ್ನ ಕನಸಿನ ಭಾರತ
ಆಗದಿರಲಿ ಆಚಾರ ವಿಚಾರಗಳಲ್ಲೆಂದೂ ಭ್ರಷ್ಟಾಚಾರಗಳ ಮೇಲುಗೈ
ವೈವಿಧ್ಯತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯಲಿ ನನ್ನ ಕನಸಿನ ಭಾರತ
ಬರದಿರಲಿ ಬರಗಾಲ ರಾಷ್ಟ್ರ ನಿರ್ಮಾಣದಲಿ ಜೋಡಿಸುವ ಕರಗಳಿಗೆ
ತಾರತಮ್ಯಗಳ ತೆಪ್ಪದಲಿ ತತ್ತರಿಸಿ ಹೋಗದಿರಲಿ ನನ್ನ ಕನಸಿನ ಭಾರತ
ಅಲವತ್ತುಕೊಂಡರೂ ನೀಗದು ಮನುಜನಲಿ ಅಧಿಕಾರ ದಾಹ ಅರ್ಚನಾ
ಪಕ್ಷಗಳ ಪಾರುಪತ್ಯದಲಿ ಪಾವಿತ್ರ್ಯ ಕಳೆಯದಿರಲಿ ನನ್ನ ಕನಸಿನ ಭಾರತ