ನಂಬಲಸಾಧ್ಯವಾದ ಒಂದು ಅಪೂರ್ವ ಬದುಕಿನ ಸತ್ಯಕಥೆ

ವಿಶೇಷ ಬರಹ

ಎಡ್ಮಂಡ್ ಥಾಮಸ್ ಕ್ಲಿಂಟ್

ಎಡ್ಮಂಡ್ ಥಾಮಸ್  ಕ್ಲಿಂಟ್ :

 ಆತ ಬದುಕಿದ್ದು  ೬ ವರ್ಷ ೧೧ ತಿಂಗಳು.  ಅಷ್ಟರಲ್ಲೇ ಆತ ಬಿಡಿಸಿದ್ದು ೨೫ ಸಾವಿರದಷ್ಟು ಚಿತ್ರಗಳು !

    ನಿಜ, ನಂಬಲಸಾಧ್ಯವಾದರೂ  ನಂಬಲೇಬೇಕಾದ  ಸಂಗತಿ. ವಿಧಿ ಒಮ್ಮೊಮ್ಮೆ ಕೆಲವರೊಂದಿಗೆ ಬಹಳ ಕ್ರೂರ ಆಟವಾಡುತ್ತದೆ. ತೀರಾ ಅನ್ಯಾಯ ಅನಿಸುವ ಹಾಗೆ ಮಾಡಿಬಿಡುತ್ತದೆ. ಅದು ಯಾರ ಕೈಯಲ್ಲೂ ಇಲ್ಲವಲ್ಲ. ಆ ಮಹಾನ್ ಬಾಲ ಪ್ರತಿಭಾವಂತನನ್ನು ಅಷ್ಟು ಅವಸರವಾಗಿ ಕೊಂಡೊಯ್ಯುವ ದರ್ದು‌ ನಿನಗೇನಿತ್ತು ಎಂದು ಕೇಳಿದರೂ ಉತ್ತರ ಕೊಡುವವರು ಯಾರು?

       ಇದೇನೂ ಕಟ್ಟುಕಥೆಯಲ್ಲ. ನಿಜವಾಗಿ ನಡೆದದ್ದು. ನಮ್ಮ ನೆರೆಯ ಕೇರಳದ ಕೊಚ್ಚಿಯಲ್ಲಿ. ೧೯೭೬ ರ ಮೇ ೧೯ ರಂದು ತಂದೆ ಜೊಸೆಫ್ ತಾಯಿ ಚಿನ್ನಮ್ಮ ಕ್ಲಿಂಟ್ ದಂಪತಿಗಳ‌ ಮಗನಾಗಿ ಹುಟ್ಟಿದ ಎಡ್ಮಂಡ್ ಕ್ಲಿಂಟ್ ಹುಟ್ಟುಕಲಾವಿದ. ಎರಡೂವರೆ ವರ್ಷದವನಿದ್ದಾಗಲೇ ಕೈಗೆ ಸಿಕ್ಕ  ಕೆಂಪು ಇಟ್ಟಿಗೆ ತುಂಡುಗಳಿಂದಲೇ ರೇಖೆ ಎಳೆಯಲಾರಂಭಿಸಿದ್ದ. ಅದನ್ನು ಗಮನಿಸಿದ ತಂದೆ  ಬಣ್ಣದ ಚಾಕಪೀಸ್ ಗಳನ್ನು ತಂದುಕೊಟ್ಟ. ಮನೆ ಗೋಡೆಗಳ ಮೇಲೂ ಆತ ಚಿತ್ರ ಬಿಡಿಸಲಾರಂಭಿಸಿದ.

     ಒಮ್ಮೆ ಸರ್ಕಸ್ ಕಂಪನಿ ಬಂದಿತ್ತು. ನೋಡಿ ಮನೆಗೆ ಬಂದವನೇ ಅಲ್ಲಿ ತಾನು ಕಂಡ ಪ್ರಾಣಿಗಳ ಚಿತ್ರ ಬಿಡಿಸತೊಡಗಿದ. ದಿನಾಲು ಹತ್ತಿಪ್ಪತ್ತು ಚಿತ್ರ ಬಿಡಿಸುವದು ಅವನಿಗೆ ಮಾಮೂಲು‌ ಅಭ್ಯಾಸ. ಮೂರುವರ್ಷವಾಗುತ್ತಿದ್ದಂತೆ ಅವನ ದೃಷ್ಟಿ ಇನ್ನೂ ವಿಶಾಲವಾಯಿತು.

          ಒಂದು ಅಚ್ಚರಿಯ ಸಂಗತಿ ಎಂದರೆ ಕ್ಲಿಂಟ್ ತನ್ನ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿದ್ದು ಕಡಿಮೆ. ಅವನು ಹೆಚ್ಚಾಗಿ ಬಿಡಿಸುತ್ತಿದ್ದುದು ಹಿಂದೂ ದೇವದೇವತೆಗಳದು ಮತ್ತು ನಿಸರ್ಗ, ಪ್ರಾಣಿ ಪಕ್ಷಿಗಳದು. ಅವನ ಕುಂಚದಲ್ಲಿ ಶಿವ, ಹನುಮಂತ ಕೃಷ್ಣ, ಗಣಪತಿ, ಹಿಂದೂ ದೇವಾಲಯಗಳು, ಮಹಿಷಾಸುರ, ಕೇರಳದ ಹಬ್ಬ ಉತ್ಸವದ ದೃಶ್ಯಗಳು ಮೂಡಿಬರುತ್ತಿದ್ದವು.

‌        ‌ಒಮ್ಮೆ ತಂದೆ ಮಗನಿಗೆ ಕೇಳಿದ –

” ನಿನಗೆ  ಏನು ಇಷ್ಟ? “

     ಬಾಲಕ ಹೇಳಿದ – ” ಭಗವದ್ಗೀತೆ”.

    ಸಂಜೆ ಆಕಾಶವನ್ನು ನೋಡುತ್ತ ಕ್ಲಿಂಟ್ ಅಪ್ಪನಿಗೆ ಕೇಳುತ್ತಿದ್ದ -” ಇಷ್ಟೆಲ್ಲ ಬಣ್ಣಗಳು ಅಲ್ಲಿ ಹೇಗೆ ಬಂದವು, ಅಪ್ಪಾಜಿ? ಆಕಾಶ ಮತ್ತು ಸೂರ್ಯ ಪ್ರತಿದಿನ ಹೀಗೆ ಮಾಡುವದು ಹೇಗೆ ಸಾಧ್ಯವಾಗುತ್ತದೆ?”

       ತಂದೆ ಬಣ್ಣ.  ಬಣ್ಣ.. ಎಂದು ಬಡಬಡಬಡಿಸಿದ. ಅವನ ಬಳಿ ಅದಕ್ಕೆ ಉತ್ತರವಿರಲಿಲ್ಲ.

        ಮೂರನೆಯ ವರ್ಷದಲ್ಲಿ ಒಮ್ಮೆ ಕ್ಲಿಂಟ್‌ ಅನಾರೋಗ್ಯಕ್ಕೀಡಾದ. ಆಸ್ಪತ್ರೆ ಸೇರಿದ ಕ್ಲಿಂಟ್ ಹತ್ತು ತಿಂಗಳು ಅಲ್ಲೇಇದ್ದ. ತನ್ನಹಾಸಿಗೆಯ ಮೇಲೆ ಕುಳಿತೇ ಆತ ಚಿತ್ರ ಬಿಡಿಸುತ್ತಿದ್ದ. ಅವನಿಗೇನೋ ಮೂತ್ರಪಿಂಡದ ತೊಂದರೆಯಿತ್ತು. ಮತ್ತೆ  ಸ್ವಲ್ಪ‌ಕಾಲ ಚೇತರಿಸಿಕೊಂಡ. ಶಾಲೆ ಸೇರಿದ. ಅಲ್ಲೂ ಆತ ಚಿತ್ರ ಬಿಡಿಸುತ್ತಿದ್ದ. ಆತ. ಗುರುಮುಖೇನ ಅಥವಾ ಚಿತ್ರಕಲಾ ಶಾಲೆಯಿಂದ ಚಿತ್ರ ಕಲೆ ಕಲಿತಿರಲಿಲ್ಲ. ಒಂದು ಚಿತ್ರಕಲಾ ಸ್ಪರ್ಧೆಯಲ್ಲಿ ಆತ ಪ್ರಥಮ ಬಹುಮಾನದ ಚಿನ್ನದ ಪದಕ‌ ಪಡೆದ.  ಅವನು ಚಿತ್ರ ಬಿಡಿಸುವ ರೀತಿ ನೋಡಿ ಪ್ರೊ. ಸುಜಾತಾದೇವಿ ಎಂಬವರು‌ ಅವನ ತಂದೆ ತಾಯಿಗೆ ಹೇಳಿದರು -” ನಿಮ್ಮ ಮಗನನ್ನು  ಯಾವ ಚಿತ್ರಕಲಾ ಶಾಲೆಗೂ ಸೇರಿಸಬೇಡಿ. ಅವನಿಗೆ ಕಲಿಸಬಲ್ಲ ಸಮರ್ಥರು ಯಾರೂ ಇಲ್ಲ.

       ಅವನದು ನೇಚುರಲ್ ಆರ್ಟ. ಅದು ಕಲಿತು ಬರುವಂತಹದಾಗಿರಲಿಲ್ಲ. ಇನ್ನೊಂದು ಸ್ಪರ್ಧೆಯಲ್ಲಿ ಆತ ೯೦ ನಿಮಿಷಗಳಲ್ಲಿ ಐದು ಚಿತ್ರ ಬಿಡಿಸಿ ಎಲ್ಲದಕ್ಜೂ ಬಹುಮಾನ ಪಡೆದ.

     ಅವನಿನ್ನೂ ಅನಾರೋಗ್ಯದಿಂದ ಪೂರ್ತಿ ಗುಣಮುಖನಾಗಿರಲಿಲ್ಲ.

     ೧೯೮೩- ಕೇರಳದ ಕೋಜಿಕೋಡೆಯಲ್ಲಿ ಒಂದು ಚಿತ್ರಕಲಾ ಸ್ಪರ್ಧೆ. ಹತ್ತು ಸಾವಿರ ಜನ ಭಾಗವಹಿಸಿದ್ದರು. ಅವರಲ್ಲಿ ಅತಿ ಚಿಕ್ಕವನೆಂದರೆ ಕ್ಲಿಂಟ್. ಆದರೆ ಆತ ಬಿಡಿಸಿದ ಆನೆಗಳ ಉತ್ಸವದ ಚಿತ್ರ ಮೊದಲ ಬಹುಮಾನ ಗಳಿಸಿತು. ಚಿನ್ನದ ಪದಕ, ಶೀಲ್ಡ್ ದೊರಕಿತು. ಅದು ಅವನ ಹದಿಮೂರನೇ ಮತ್ತು ಕೊನೆಯ ಚಿತ್ರಕಲಾ ಸ್ಪರ್ಧೆಯಾಗಿತ್ತು. ಮರುವರ್ಷ ಅವನನ್ನು ಅದೇ ಸ್ಪರ್ದೆಯ ಉದ್ಘಾಟನೆಗೆ ಆಮಂತ್ರಿಸಲಾಯಿತು.

              ನಿಧಾನವಾಗಿ ಕ್ಲಿಂಟ್ ಸಾವಿನೆಡೆಗೆ  ಹೆಜ್ಜೆಯಿಡತೊಡಗಿದ್ದ.

೧೯೮೩ ಎಪ್ರಿಲ್ ೧೪

    ಕ್ಲಿಂಟ್ ಒಮ್ಮೆಲೇ‌ ಕೋಮಾಕ್ಕೆ ತೆರಳಿದ. ಚಿಕಿತ್ಸೆ ಫಲಕಾರಿಯಾಗಲಿಲ್ಲ.  ಕೇರಳದ ಪ್ರಸಿದ್ಧ ವಿಶು ಹಬ್ಬದ ದಿನವೇ ಕ್ಲಿಂಟ್ ಕೊನೆಯುಸಿರೆಳೆದಿದ್ದ. ಇಡೀ ಊರು ಸ್ತಬ್ಧವಾಯಿತು. ಅಂಗಡಿಗಳನ್ನು ಮುಚ್ಚಿ ಎಲ್ಲ ಗೌರವ ಸೂಚಿಸಿದರು.

     ಒಂದು ದೈವಜಾತ ಪ್ರತಿಭೆ ಅಕಾಲದಲ್ಲಿ ಮಣ್ಣುಗೂಡಿಹೋಯಿತು. ಏಳು ವರ್ಷವಾಗುವ ಮೊದಲೇ ಮರೆಯಾದ ಕ್ಲಿಂಟ್  ೨೪-೨೫ ಸಾವಿರ ಚಿತ್ರಗಳನ್ನು ಬಿಡಿಸಿದ್ದ. ಆತನ ಕುರಿತು  ಕಿರುಚಿತ್ರವೊಂದು‌ ನಿರ್ಮಾಣವಾಗಿದೆ. ಅವನ ಜೀವನ ಪರಿಚಯಿಸುವ ಪುಸ್ತಕವೂ ಪ್ರಕಟವಾಗಿದೆ. ಅವನಿಗೆ ಜಾಗತಿಕವಾದ ಹೆಸರೂ ಇದೆ. ಆದರೆ….?


               – ಎಲ್. ಎಸ್. ಶಾಸ್ತ್ರಿ

Leave a Reply

Back To Top