ಮನದೀಪ್ ರಾಯ್-ಶ್ರದ್ಧಾಂಜಲಿಗಳು.

ಇತರೆ

ಮನದೀಪ್ ರಾಯ್-ಶ್ರದ್ಧಾಂಜಲಿಗಳು.

ಕೆ.ವಿ.ವಾಸು

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯಮತ್ತು ಪೋಷಕ ನಟ ಮನದೀಪ್ ರಾಯ್ ತಮ್ಮ 73 ನೇ ವಯಸ್ಸಿನಲ್ಲಿ ಇತ್ತೀಚೆಗೆ ತೀವ್ರ ಹೃದಯಾಘಾತದಿಂದ ನಿಧನ
ಹೊಂದಿದ್ದಾರೆ. ಕನ್ನಡ ಚಿತ್ರರಂಗದ ನಟ ನಟಿಯರು ಒಬ್ಬರ ಹಿಂದೆ ಒಬ್ಬರು
ಅನ್ನುವ ಹಾಗೇ ನಿಧನ ಹೊಂದುತ್ತಿರುವುದು ತುಂಬಾ ಬೇಸರದ ಸಂಗತಿ. ಮನದೀಪ್ ರಾಯ್ ಅವರು ನಿಧನ
ಹೊಂದಿದ ಎರಡು- ಮೂರು ದಿನಗಳ ಹಿಂದೆಯಷ್ಟೇ‌
ಮತ್ತೋರ್ವ ಕನ್ನಡದ ಪೋಷಕ ನಟ ಲಕ್ಷ್ಮಣ್ ನಿಧನ
ಹೊಂದಿದ್ದರು. ಕಳೆದ ವರ್ಷದ ಡಿಸಂಬರ್ ತಿಂಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಮನದೀಪ್ ರಾಯ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮತ್ತೊಮ್ಮೆ ತೀವ್ರ ಹೃದಯಾಘಾತಕ್ಕೆ ತುತ್ತಾಗಿ
ನಮ್ಮನ್ನಗಲಿದ್ದಾರೆ.

ಮೂಲತಃ ಬೆಂಗಾಳಿಯವರಾದ ಮನದೀಪ್ ರಾಯ್ ತಮ್ಮ ಭವಿಷ್ಯವನ್ನು ಕನ್ನಡ ಚಿತ್ರರಂಗದಲ್ಲಿ ಕಂಡು ಕೊಂಡರು. ದಿವಂಗತ ಶಂಕರ ನಾಗ್ ನಿರ್ದೇಶನದ ಮಿಂಚಿನ ಓಟ ಚಿತ್ರದಲ್ಲಿ ( 1982 ) ಬಣ್ಣ ಹಚ್ಚುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಮನ್ ದೀಪ್ ರಾಯ್, ಸುಮಾರು 40 ವರ್ಷಗಳ ಚಿತ್ರ ಯಾತ್ರೆಯಲ್ಲಿ ಮಿಂಚಿನ ವೇಗದಲ್ಲಿ ಸಂಚರಿಸಿ,
500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ದಾಖಲೆ
ಬರೆದಿದ್ದಾರೆ. ಡಾ.ರಾಜ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ ನಾಗ್, ಅಂಬರೀಶ್, ರಮೇಶ್ ಅರವಿಂದ್
ಸೇರಿದಂತೆ ಪ್ರಮುಖ ನಾಯಕ ನಟರ‌ ಚಿತ್ರಗಳಲ್ಲಿ ‌ನಟಿಸಿರುವ ಮನದೀಪ್ ರಾಯ್ ರವರನ್ನು
ಕನ್ನಡ ಚಿತ್ರರಂಗದ ಮತ್ತೊಬ್ಬ ” ನರಸಿಂಹರಾಜು ” ಎಂದು ಕರೆಯಲು ಅಡ್ಡಿಯಿಲ್ಲ. ಹಾಸ್ಯ ನಟನೊಬ್ಬ 500
ಚಿತ್ರಗಳಲ್ಲಿ ನಟಿಸುವುದು ಸಾಮಾನ್ಯದ ವಿಷಯವಲ್ಲ. ಅದರೆ ಮನದೀಪ್ ರಾಯ್ ಅದನ್ನು ಸಾದ್ಯವಾಗಿಸಿದ್ದಾಸರೆ. ಕನ್ನಡ ಚಿತ್ರರಂಗದಲ್ಕಿ ಹಾಸ್ಯ ಪಾತ್ರ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ” ನರಸಿಂಹರಾಜು”. ಅವರ ಮುಖ
ನೋಡುತ್ತಲೇ ಪ್ರೇಕ್ಷಕರು ನಗಲು ಶುರು ಮಾಡುತ್ತಿದ್ದರು.
50, 60 ಮತ್ತು 70 ರ ದಶಕಗಳ ಚಿತ್ರಗಳಲ್ಲಿ ” ನರಸಿಂಹ ರಾಜು” ಅತ್ಯಂತ ಬೇಡಿಕೆಯ ಹಾಸ್ಯ ನಟರಾಗಿದ್ದರು. ಅದೇ ರೀತಿ
ಬಾಲಕೃಷ್ಣ ಸಹ ತಮ್ಮ ಸಹಜ ಅಭಿನಯದ‌ ಮೂಲಕ
ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಮನದೀಪ್ ರಾಯ್ ಅತ್ತ ಕಡೆ ನರಸಿಂಹರಾಜು ಮತ್ತು ಇತ್ತ ಕಡೆ ಬಾಲಕಷ್ಣ ಇಬ್ಬರನ್ನು ಆವಾಹಿಸಿಕೊಂಡವರ ಹಾಗೆ ಅತ್ಯುತ್ತಮ ರೀತಿಯಲ್ಲಿ ನಟಿಸಿ ತಮ್ಮ ಪಾತ್ರಗಳಿಗೆ ಜೀವ ತುಂಬುತ್ತಿದ್ದ ರೀತಿ ಅನನ್ಯವಾಗಿತ್ತು. 500 ಚಿತ್ರಗಳಲ್ಲಿ ನಟಿಸಿದ್ದರೂ ಸಹ ಅವರ ಆರ್ಥಿಕ ಪರಿಸ್ಥಿತಿ ಅಷ್ಟಕಷ್ಟೇ. ಕನ್ನಡದ ಚಿತ್ರರಂಗದ
ಬಹುತೇಕ ಹಾಸ್ಯಕಲಾವಿದರ ಬದುಕು ಇದೇ ರೀತಿಯದ್ದು ಎಂದು ವಿಷಾದಪೂರ್ವಕವಾಗಿ ಹೇಳಬೇಕಾಗಿದೆ. ಇದನ್ನು ಹೆಚ್ಚು‌ ವಿಸ್ತರಿಸುವ ಅಗತ್ಯವಿಲ್ಲವೆಂದು ಕಾಣುತ್ತದೆ.

ಮಿಂಚಿನ ಓಟ, ದೇವರ ಆಟ, ಅಮೃತಧಾರೆ, ಕುರಿಗಳು ಸಾರ್ ಕುರಿಗಳು, ಬಿಡುಗಡೆಯ ಬೇಡಿ, ಬಾಡದ ಹೂ,
ನನ್ನವರು, ಬೆಳದಿಂಗಳ ಬಾಲೆ, ಚಂದ್ರಮುಖಿ ಪ್ರಾಣಸಖಿ,
ಅಮಾನುಷ, ಕೋಟಿಗೊಬ್ಬ, ಅಪೂರ್ವ ಸಂಗಮ, ಏಳು ಸುತ್ತಿನ ಕೋಟೆ, ಆಕ್ಸಿಡೆಂಟ್ ಮುಂತಾದ ಚಿತ್ರಗಳಲ್ಲಿ
ನಟಿಸಿರುವ ಮನದೀಪ್ ರಾಯ್ ಆರಕ್ಕೆ ಏರದ, ಮೂರಕ್ಕೆ ಇಳಿಯದ ಕಲಾವಿದರಾಗಿದ್ದರು. ಚಂದ್ರಮುಖಿ
ಪ್ರಾಣ ಸಖಿ” ಎಂಬ ಚಿತ್ರದಲ್ಲಿ ಅವರ ಅಭಿನಯ ಸರ್ವಶ್ರೇಷ್ಠ ವಾಗಿದೆ ಎಂದು ಹೇಳಬಹುದು. ಇಂತಹ ಉತ್ತಮ ಕಲಾವಿದನ ನಿಧನ ಕನ್ನಡ ಚಿತ್ರರಂಗಕ್ಕೆ ಉಂಟಾದ ಬಾರಿ ನಷ್ಟವೆಂದು ಹೇಳಬಹುದು. ಅವರಿಗೆ
ಗೌರವಪೂರ್ವಕ ಶ್ರದ್ಧಾಂಜಲಿಗಳು.


ಕೆ.ವಿ.ವಾಸು

Leave a Reply

Back To Top