ಕಾವ್ಯ ಸಂಗಾತಿ
ಗಜಲ್
ಅರುಣಾ ನರೇಂದ್ರ
ಅವನು ಮೌನ ಮುರಿದು ದಿನವೆಲ್ಲಾ ನನ್ನ ಹೆಸರನ್ನೇ ಕರೆದನಂತೆ
ನನ್ನ ನೆನಪಲ್ಲೇ ನಿದ್ದೆಯಿರದೆ ಹೊರಳಾಡಿ ರಾತ್ರಿ ಕಳೆದನಂತೆ
ಇಂದೇಕೋ ಮುಂಜಾವು ಮುಗುಳ್ನಗುತ್ತಿದೆ ಎನಿಸುತ್ತಿದೆ
ನೂರು ಬಾರಿ ಬರೆದು ಹರಿದು ಕೊನೆಗೂ ಕವಿತೆ ಕಟ್ಟಿದನಂತೆ
ನನ್ನೊಡಲ ಬೆಂಕಿ ತಣಿಸಲು ಇಬ್ಬನಿಗೆ ಕೇಳಿಕೊಂಡಿದ್ದೆ
ತಂಗಾಳಿಯ ಕರೆದು ತಂಪೆರೆಯಲು ಹೇಳಿ ಕಳಿಸಿದನಂತೆ
ನನ್ನೆದೆಯ ಗಾಯದ ತುಂಬಾ ಅವನದೇ ಗೀರುಗಳಿವೆ ಗೆಳತಿ
ನೋವು ಮರೆಸಿ ಖುಷಿಪಡಿಸಲು ಕಾಮನ ಬಿಲ್ಲು ಹಿಡಿದು ತಂದನಂತೆ
ಅವನಿಗಾಗಿ ಕಾದು ಕಾದು ಅರುಣಾ ಮನೆ ಖಾಲಿ ಮಾಡಿದ್ದಾಳೆ
ವಿಳಾಸ ಹಿಡಿದು ಹುಡುಕುತ್ತಾ ಅವನು ಖಬರ್ ವರೆಗೂ ಬಂದನಂತೆ