ತೆಲುಗು ಕವಿತೆಯ ಅನುವಾದ

ಅನುವಾದ ಸಂಗಾತಿ

ಮನೆಯೊಂದು ಸ್ಟೋರಿ ಟೆಲ್ಲರ್

ತೆಲುಗು ಮೂಲ : ಗೀತಾಂಜಲಿ


ಕನ್ನಡಕ್ಕೆ : ಧನಪಾಲ ನಾಗರಾಜಪ್ಪ

ಈಗಲೋ ನೀನು ಬರುವುದು??
ನಾನು ಮನೆ ಖಾಲಿ ಮಾಡಿ ಹೋದ ಮೇಲೆ!
ನನಗೆ ಗೊತ್ತು ಈಗ ನೀನು ಬರುವೆಯೆಂದು
ಈಗಲಾದರೂ ನನ್ನ ಬೀದಿಯೊಳಕ್ಕೆ ನೆಟ್ಟಗೆ ನಡೆದುಕೊಂಡು ಬರುವೆನಂತಿಯಾ?
ಸರಿ… ಬಾ…
ನಾನು ಇರದ ಖಾಲಿ ಮನೆಯ ಮುಂದೆ ನಿಂತು
ಹಿಂದೊಮ್ಮೆ ನಿನಗಾಗಿ ಕಾದುನೋಡಿದ
ಈ ಶೂನ್ಯದ ಮನೆಯನ್ನು ಗಾಜಿನ ಕಂಗಳಿಂದ ನೋಡಿಕೊ
ನಾನು ನಿನಗೆ ಹೇಳಬೇಕೆಂದುಕೊಂಡ ಮಾತುಗಳು ಕೇಳಿದರೆ
ಈಗಲಾದರೂ ಕಿವಿಗೊಟ್ಟು ಕೇಳಿಸಿಕೊ…
ಕಂಬನಿಯೇನಾದರೂ ಜಾರಿದರೆ ಜಾರಲುಬಿಡು!
ವಿಷಾದದ ಕತ್ತಲೆ ತುಂಬಿದ ಕೋಣೆಗಳಲ್ಲಿ
ಬೆಳಕಿನ ಮಿಣುಕುಗಳೇನಾದರೂ ಹೊಳೆದರೆ ಹಿಡಿದುಕೊ ಕೆಲವನ್ನು
ಇನ್ನು ಹೊರಟುಹೋಗು ಅಲ್ಲಿ ನಾನಿಲ್ಲ
ನಿನಗೆ ಇನ್ನು ಸಿಗುವುದಿಲ್ಲ!
ನಾನಿದ್ದಾಗ ಇಷ್ಟು ದಿನಗಳು ಬಾರದಿದ್ದ ನೀನು
ಖಾಲಿ ಮನೆಯ ಮುಂದೆಯೂ ಕೂಡ ನಿಲ್ಲದೆ ಹೊರಟುಹೋಗು…
ಮತ್ತೆ ಎಂದೂ ಬರಬೇಡ!
ಮನುಷ್ಯನಂತೆ ಮಾರ್ಪಟ್ಟೆನಂತಿಯಾ…
ನಾನು ಹಚ್ಚಬೇಕಾದ ದೀಪವಿನ್ನೂ ಕತ್ತಲನ್ನು ಕುಡಿಯುತ್ತಲೇ ಇದೆಯಂತಿಯಾ ಇರಲಿಬಿಡು!
ನಾನು ಬಾರದಿದ್ದರೇನಂತೆ? ಇಲ್ಲದಿದ್ದರೇನಂತೆ?


ದೀಪ ತನ್ನಷ್ಟಕ್ಕೆ ತಾನೇ ಬೆಳಗುವುದು
ಹೋಗು ನೀನು…
ಇನ್ನು ನನ್ನನ್ನು ಕರೆಯಬೇಡ!
ನೀನೂ ಮತ್ತೆ ಬರಬೇಡ!
ನೀನು ಇರದೆ ಮನೆಯೇನೂ ಮಂಕಾಗುವುದಿಲ್ಲ
ನನ್ನನ್ನು ನೋಯಿಸಿದ ನಿನ್ನನ್ನು ಮನೆಯೆಂದೂ ಪ್ರೀತಿಸಲಿಲ್ಲ; ಕ್ಷಮಿಸುವುದೂ ಇಲ್ಲ!
ನೀನು ನನ್ನ ಜೊತೆಯಿರದ್ದಿದಾಗ
ಮನೆಯೇ ಮನುಷ್ಯನಂತೆ ಮಾರ್ಪಟ್ಟು
ನನ್ನ ಜೊತೆ ಮಾತಾಡುವುದು
ಬೆಚ್ಚಗೆ ಅಪ್ಪಿಕೊಂಡು ಸಂತೈಸುವುದು!
ನಾನು ಇರದೆಹೋದರೆ ಮನೆ ಅಳುತ್ತದೆ
ತನಗೆ ತಾನೇ ಕತೆಗಳನು ಹೇಳಿಕೊಳ್ಳುತ್ತದೆ
ಕೋಣೆ ಕೋಣೆಯನು ಮಾತಿಗೆಳೆಯುತ್ತದೆ
ತನ್ನಲ್ಲಿ ತಾನು ಕಾತರದಿಂದ ತಿರುಗುತ್ತ
ನನ್ನ ಗಾಯಗಳನ್ನು ಸವರುತ್ತದೆ
ಏಕಾಂತದ ರಾತ್ರಿಗಳಲ್ಲಿ ನಾನು ಮೈಮರೆತು ಕೇಳಿದ ಗುಲಾಂ ಅಲಿ ಗಜಲ್ಲುಗಳನು, ನನ್ನ ರಫಿಯ ಹಾಡುಗಳನು, ನೂರ್ ಜಹಾನ್ ಗಮಕಗಳನು ತಾನು ನೆನಪಿಸಿಕೊಂಡು ಮನೆ ಕಣ್ಣೀರಿಡುತ್ತದೆ
ನನ್ನನು ನೆನಸಿಕೊಂಡು ವಿರಹದ ವೇದನೆಯಲಿ ಸುಡುತ್ತಿರುತ್ತದೆ
ನನ್ನ ಪಾದಗಳ ಸ್ಪರ್ಶಕ್ಕಾಗಿ ನೆಲವನು ಮದ್ದಾಡುತ್ತಿರುತ್ತದೆ
ನನ್ನನ್ನು ಅಲ್ಲಿ ಇರದಂತೆ ಮಾಡಿದ ನಿನ್ನ ಮೇಲೆ ಸಿಟ್ಟಿನಿಂದ ಕೆರಳುತ್ತಿರುತ್ತದೆ
ನನ್ನ ಕಂಬನಿಯಿಂದ ಕಲೆಗಳಾದ ತಲೆದಿಂಬು ಗಾಲೀಬನನು ಪ್ರೀತಿಯಿಂದ ನೇವರಿಸುತ್ತದೆ
ನಾನು ಬರೆದ ಕತೆ-ಕವನಗಳನು ನೀನು ಕೇಳಲಿಲ್ಲವೇನೋ ಆದರೆ ಮನೆ ಕೇಳಿಸಿಕೊಂಡಿದೆ
ನಾನು ಹೋದ ಮೇಲೆ ಮನೆ ಹೊಸ್ತಿಲಲ್ಲಿ ಕುಳಿತುಕೊಂಡು
ಮೆಲ್ಲಗೆ ಕವಿತೆಗಳ ಪುಟಗಳನು ತಿರುವಿಸುತ್ತ ಕಂಬನಿ ಸುರಿಸುತ್ತದೆ
ಕಿಟಕಿಗಳ ಜೊತೆ, ಕೋಣೆಗಳೊಟ್ಟಿಗೆ, ಬಾಗಿಲುಗಳೊಂದಿಗೆ
ಹಾಸಿಗೆಗಳ ಜೊತೆ, ಪರದೆಗಳೊಟ್ಟಿಗೆ, ಅಡುಗೆಯ ಪಾತ್ರೆಗಳೊಂದಿಗೆ
ಆರಿಹೋದ ಒಲೆಯ ಜೊತೆ
ಅಲ್ಮಾರದಲ್ಲಿರುವ ಪುಸ್ತಕಗಳೊಟ್ಟಿಗೆ
ಮೇಜಿನ ಮೇಲಿನ ನನ್ನ ಹಾಳೆಗಳೊಂದಿಗೆ
ಲೇಖನಿಯ ಜೊತೆ, ನನ್ನ ಚಹದ ಕಪ್ಪಿನೊಟ್ಟಿಗೆ,
ಹ್ಯಾಂಗರಿನಲ್ಲಿ ನೇತಾಡುತ್ತ
ಗಾಳಿಗೆ ಅಲುಗಾಡುವ ನನ್ನ ಸೀರೆಗಳ ಜೊತೆ
ನನ್ನನ್ನು ನಾನು ನೋಡಿಕೊಂಡ ನಿಲುಗನ್ನಡಿಯೊಟ್ಟಿಗೆ
ಕನ್ನಡಿಯ ಮೇಲಿನ ನನ್ನ ಕಂಗಳ ಕಾಡಿಗೆಯ ಕಲೆಗಳೊಂದಿಗೆ
ಗೋಡೆಯ ಮೇಲಿನ ಗೊಂಬೆಗಳ ಜೊತೆ
ಮನೆಯನ್ನು ಬೆಸೆದುಕೊಂಡಿರುವ ಹೂ ಬಳ್ಳಿಗಳೊಟ್ಟಿಗೆ
ಹಿತ್ತಲಿನಲ್ಲಿ ಹಾಡುವ ಹಕ್ಕಿಗಳೊಂದಿಗೆ
ಮನೆಯ ಮಾಳಿಗೆ ಜೊತೆ
ಮಾಳಿಗೆಯ ಮೇಲಿನ ಬೆಳದಿಂಗಳಿನೊಟ್ಟಿಗೆ
ತಾರೆಗಳ ಜೊತೆ, ಬಾಗಿಲಲ್ಲಿನ ರಂಗೋಲಿಯೊಂದಿಗೆ
ರಂಗೋಲಿಯ ಮೇಲೆ ಬಿದ್ದ ಬಿಸಿಲಿನ ಜೊತೆ
ರಾತ್ರಿಯಲ್ಲಿ ಉರುಳಿದ ಸುರಹೊನ್ನೆ ಹೂಗಳೊಟ್ಟಿಗೆ
ಕತೆಗಳನು ಹೇಳುವುದು ಮನೆ
ಯಾರ ಕತೆಗಳೆಂದುಕೊಂಡೆ?
ನಿನ್ನ ನನ್ನ ಕತೆಗಳೇ…!
ನಟ್ಟನಡುವೆ ನಿಂತುಹೋದ ನಮ್ಮ ಕತೆಗಳು!
ಏನೆಂದುಕೊಂಡೆಯೇನು… ಮನೆಯೊಂದು ಸ್ಟೋರಿ ಟೆಲ್ಲರ್!
ಭಯಪಡಬೇಡ
ನೀನು ಇರದಿದ್ದರೆ ಮನೆಯೇನೂ ಮಂಕಾಗುವುದಿಲ್ಲ
ಮನೆ ಕತೆಗಳಷ್ಟೇ ಅಲ್ಲ; ಹಾಡುಗಳನ್ನು ಕೂಡಾ ಹಾಡುವುದು.
ಹಾಡದೆ ಕೊರಳಲ್ಲೇ ನಿಂತುಹೋದ ಹಾಡುಗಳನ್ನೇ ಹಾಡುವುದೀ ಮನೆ
ನಾನು ಬರೆದ ಕವನಗಳನೇ ಹಾಡುವುದು
ಹೌದು ಮನೆ ಹಾಡುತ್ತದೆ
ಅದಕ್ಕೇ ಇದು ಮನೆ
ನೀನು ನನಗೆ ಮಾಡಿದ ಗಾಯಗಳನ್ನು ಹಾಡುವ ಗಾಯಕಿ! ಮನೆಯೊಂದು ಸಂಗೀತ!
ಮನೆ ಕತೆಗಳನು ಬರೆಯುತ್ತದೆ
ಮನೆಯೊಂದು ಪುಸ್ತಕವಾಗುತ್ತದೆ
ಮನೆಯೊಂದು ಲೇಖನಿಯಾಗುತ್ತದೆ
ಮನೆಯೊಂದು ಬರಹಗಾರ್ತಿಯಾಗಿ ಬದಲಾಗುತ್ತದೆ
ಕೇಳಿ ನೋಡು… ಮನೆ ಮಾತನಾಡುತ್ತದೆ
ಥೇಟ್ ನನ್ನಂತೆಯೇ!
ಹೌದು ನಾನು ಮನೆಯಾಗಿ ಮಾರ್ಪಟ್ಟ ಮೇಲೆ
ಮನೆಯೇ ನಾನಾಗಿ ಮಾರ್ಪಟ್ಟ ಮೇಲೆ
ಮನೆ, ನಾನೂ ಒಂದೇ ಆದ ಮೇಲೆ
ನಾನು ಮನೆ ಬಿಟ್ಟು ಹೋದರೂ
ಮನೆ ನಾನಾಗಿ ನಿಂತು
ನೇರ ನಿಲುವಿನ ನೋಟದ ಕಂಗಳಿಂದ
ನಿನ್ನೊಡನೆ ಮಾತನಾಡುತ್ತದೆ
ನಿನ್ನನ್ನು ನನ್ನಂತೆಯೇ ಪ್ರಶ್ನಿಸುತ್ತದೆ ಎಚ್ಚರಿಸುತ್ತದೆ
ನಿನ್ನನ್ನು ಒಳಬರಲು ಬಿಡುವುದೆಂದುಕೊಂಡೆಯಾ?
ಈ ಮನೆ ನಿನ್ನ ಇರುವಿಕೆಗಷ್ಟೇ ಅಲ್ಲ ನನ್ನ ದುಃಖಕ್ಕೇ ವಿಳಾಸವಿದು!
ನಾನು ಇರದ ಮನೆಯಲ್ಲಿ ಇದ್ದರೆ ಇರು ಹೋದರೆ ಹೋಗು!
ಮನೆ ಹಾಗೆಯೇ ಅಲ್ಲಿಯೇ ಇರುತ್ತದೆ
ಯಾಕೆಂದರೆ ಮನೆ
ನನ್ನನು ಹೂವಿನಿಂದ ಕತ್ತಿಯಂತೆ ಮಾರ್ಪಡಿಸಿದ ಕಾರ್ಖಾನೆ!
ಮನೆಯೊಂದು ಚರಿತ್ರೆ!!
ಮನೆಯೊಂದು ಸ್ಟೋರಿ ಟೆಲ್ಲರ್!!


ತೆಲುಗು ಮೂಲ : ಗೀತಾಂಜಲಿ
ಕನ್ನಡಕ್ಕೆ : ಧನಪಾಲ ನಾಗರಾಜಪ್ಪ

One thought on “ತೆಲುಗು ಕವಿತೆಯ ಅನುವಾದ

Leave a Reply

Back To Top