ಕಾವ್ಯ ಸಂಗಾತಿ
ಡಾ.ಯ.ಮಾ.ಯಾಕೊಳ್ಳಿ
ಶಬ್ದ ಗಾರುರುಡದ ಮಾಯೆ
ಅಜ್ಜ
ನಿನ್ನ ಚಿತ್ರ ನೋಡಿ
ಕವಿತೆ
ಬರೆಯಲು ತಿಣುಕಿದೆ
ಗಾಳಿಯೊಡನೆ ಗುದುಮುರಿಗೆ
ಹಾಕಿದಂತಾಯಿತು
ಯಕ್ಷ ಯಕ್ಷಿಯರು ಕಣ್ಣು
ಮುಚ್ಚಿನಕ್ಕರು
ಮೋಡದೊಳಗಿನ ಮಂಜು
ಅಣಕಿಸಿತು
ಸಾಧನಕೇರಿ ದಾರಿ
ಎಂದಾದರೂ ನನ್ನಂತವರಿಗೆ
ಸಿಕ್ಕೀತೇ ಅಜ್ಜ
ಪಾಡು ನೀನಿಟ್ಟುಕೊಂಡು ಹಾಡು
ನಮಗಿರಿಸಿದೆ
ಬೆಂದರೂ ಬೆಂಕಿಯೊಳು
ಹಾಲಾಹಲವ ನುಂಗಿ
ಕಾವ್ಯದಮೃತವ ನೀಡಿದೆ
ಸಂಸಾರ ಸಾಗರದುದ್ದ
ಆಡೋಣ ಬಾ ಎಂದೆ
ತಾಳು ತಂತಿ ರಾಗಗಳೇ
ನಿನಗೆ ಶರಣಾದವು
ಶಿವನ ತಲೆಯ ಮೇಲಿನ
ಗಂಗೆಯೆ ಇಳಿದು
ಬಂದಳುಧರೆಗೆ
ಇನ್ನು ಲೋಕ ಯಾವ ಲೆಕ್ಕ!
ಕುರುಡ ಕಾಂಚಾಣ ಕುಣಿಸಿದೆ
ಪುಟ್ಟ ವಿಧವೆಗೆ ಮರುಗಿದೆ
ಅದೆಷ್ಟು ಕರುಣೆಯೊ
ನೀ ಹಿಡಿದ ಕೊಡೆಯ ಕೆಳಗೆ
ಋಷಿಕವಿಯೆ ಮಣಿದರು
ಕವಿಗೆ ಕವಿ ಮಣಿವಂ
ಮಾತಿಗೆ ಸಾಕ್ಷಿಯಾಗಿ
ಕಾಲ ಚಕ್ರವೆ ಹಕ್ಕಿ ಮಾಡಿ
ಹಾಡಿದೆ ನೀನೇ
ಹಕ್ಕಿಯಾಗಿ ಹಾರಿದೆ
ಶಬ್ದ ಗಾರುಡದ ಮುಂದೆ
ಎಲ್ಲ ನಿಶ್ಶಬ್ದ
ನಿನ್ನಂತೆ ಹಾಡಲು ನಿನಗಷ್ಟೇ ಸಾದ್ಯ
ವರಕವಿಯ ಮುಂದೆ ನರಕವಿಗಳೋ
ಮರಿಕವಿಗಳೋ ಆದ ನಾವು
ಹಿಡಿಯಬಹುದೆ
ಸಾಗರವ ಬೊಗಸೆಯಲಿ?
ಶರಣೆಂಬುದಷ್ಟೇ ನಮ್ಮ ಭಾಗ್ಯ!
ಆಹೋ ಭಾಗ್ಯ!!
ಅದ್ಬುತ, ಅರ್ಥಪೂರ್ಣ ಕವಿತೆ ಸರ್. ಅಭಿನಂದನೆಗಳು ತಮಗೆ