ಕಾವ್ಯ ಸಂಗಾತಿ
ನನ್ನವ್ವ
ಆಶಾ ಯಮಕನಮರಡಿ
ನನ್ನವ್ವ ಹೆಬ್ಬೆಟ್ಟಿನಾಕಿ ಲೆಕ್ಕಾ ಪತ್ರಾ
ಬಂದೂ ತಿಳಿಯದಾಕಿ
ನಾ ಒಂದ ರೊಟ್ಟಿ ಬೇಡಿದರ ಅಕಿ ಮೂರು ರೊಟ್ಟಿ ಮುಟಗಿಮಾಡಿ ಕೊಡುವಾಕಿ
ಹೊತ್ತ ಹೊಂಡುದರಾಗ ಎದ್ದು ದಗದಾ
ಸುರುಮಾಡಾಕಿ ನನ್ನವ್ವ
ಹೊತ್ತು ತಾಸುಗಳ ಅರಿವಿಲ್ಲದ ಎಣಿಕಿ ತಿಳಿಯದಾಕಿ
ನನ್ನವ್ವಾ ಹೆಬ್ಬೆಟ್ಟಿನಾಕಿ
ತಕ್ಕಡಿ ತೂಕಾ ಗೊತ್ತಿಲ್ಲದಾಕಿ ನನ್ನವ್ವ
ಬೊಗಸಿ ಮರದಲೆನ ಕೊಟ್ಟಾಕಿ
ಕಡಾ ಕೇಳಿದರ ಗಡಾನ ಕೊಟ್ಟಾಕಿ
ಕೊಟ್ಟದ್ದ ಅಂದ ಮರತಬಿಡುವಾಕಿ
ನನ್ನವ್ವ ಹೆಬ್ಬೆಟ್ಟಿನಾಕಿ
ಬಾಗಿಲಿಗೆ ಬಂದವರಿಗೆಲ್ಲಾ ಉಣಿಸೀನ
ಕಳಸಾಕಿ ನನ್ನವ್ವ
ಗೊತ್ತು ಖುಣಾ ಏನು ಎತ್ತು ಅಂತಾ ಎಂದೂ ಕೇಳದಾಕಿ
ನನ್ನವ್ವಾ ಹೆಬ್ಬೆಟ್ಟಿನಾಕಿ
ಎಂಥಾ ಬ್ಯಾನಿ ಬ್ಯಾಸರಕಿಗೂ ಮದ್ದ
ತಿಳಿಯದಾಕಿ ನನ್ನವ್ವ
ಬರಿ ಉಪ್ಪಾ ಮೆಣಸಿನಕಾಯಿ ನಿವಾಳಸಿ ಸುದ್ದ ಮಾಡಾಕಿ
ನನ್ನವ್ವ ಹೆಬ್ಬೆಟ್ಟಿನಾಕಿ
ಹಿಡಿ ಕೊಟ್ಟವರ ಹೆಸರ ಪಡಿ ಮಾಡಿ
ಹೇಳಾಕಿ ನನ್ನವ್ವ
ತಲಿಮ್ಯಾಗಿನ ಸೆರಗಾ ಸರಿದಾಂಗ
ಮನೆತನದ ಸೂತ್ರಾ ಗಟ್ಟಿ ಹಿಡದಾಕಿ
ನಮ್ಮವ್ವ ಹೆಬ್ಬೆಟ್ಟಿನಾಕಿ
ಚಂದದ ಕವಿತೆ ನನ್ನವ್ವ… ಗಟ್ಟಿಗಿತ್ತಿ ಬದುಕು ಹಂಚಿ ಉಣ್ಣುವ ಮನಸು… ಕೊಟ್ಟದ್ದು ಲೆಕ್ಕ ಇಡದ ಬಾಳ ಸೊಗಸು..