ಕಾವ್ಯ ಸಂಗಾತಿ
ಮರೆಯಲೆಂತು ಗುರುವನು
ನರಸಿಂಗರಾವ ಹೇಮನೂರ
ಶಿಸ್ತಿಗಾಗಿ ಶಿಕ್ಷೆ ಕೊಟ್ಟು
ಶಿಕ್ಷಣಕ್ಕೆ ಒತ್ತು ಕೊಟ್ಟು
ಬದುಕು ಬರಹ ತಿದ್ದಿ ತೀಡಿ
ನನ್ನನೊಂದು ರೂಪು ಮಾಡಿ
ಬಾಳಿಗೊಂದು ಅರ್ಥ ಕೊಟ್ಟು
ಪೊರೆದ ಪ್ರೀತಿ ಗುರುವನು
ಮರೆಯಲೆಂತು ಅವರನು!
ಬವಣೆಯಲ್ಲಿ ಬದುಕ ನೂಕಿ
ನೋವಿನಲ್ಲು ನಗುತ ನಿತ್ಯ
ಶಾಲೆಯಲ್ಲಿ ನಮ್ಮ ನಡುವೆ
ಮರೆತು ಎಲ್ಲ ಮನೆಯ ವಾರ್ತೆ
ನಮಗೆ ಕಟೆದು ಕಲಿಸಿದಂಥ
ಪರಮ ಪೂಜ್ಯ ಗುರುವನು
ಮರೆಯಲೆಂತು ಅವರನು!
ನೀತಿಪಾಠ ಹೇಳಿ ಕೊಡುತ
ತಿಳಿಯದ್ದನ್ನು ತಿಳಿಸಿ ಕೊಡುತ
ತಮ್ಮ ಜ್ಞಾನಧಾರೆ ಎರೆದು
ನಮಗೆ ಮುಂದೆ ಸಾಗಿಸುತ್ತ
ತಾವು ಮಾತ್ರ ಅಲ್ಲೆ ಉಳಿದು
ನಾವು ಬೆಳೆದ ಬಗೆಯ ತಿಳಿದು
ಸಂಭ್ರಮಿಸುವ ಗುರುವನು
ಮರೆಯಲೆಂತು ಅವರನು!
ನಾನು ಏರಿದೆತ್ತರಕ್ಕೆ
ಅವರೆ ಇಂದು ಕಾರಣ
ಅವರ ಒಲುಮೆ ಹರಕೆ ನನ್ನ
ಕಾಯುತಿಹುದು ಕ್ಷಣ ಕ್ಷಣ
ಮರೆಯದಂತೆ ಕಾಡುತಿಹುದು
ತೀರದಂಥ ಆ ಋಣ
ಮರೆಯಲಾರೆ ಗುರುವನು
ಚರಣಕವರ ನಮಿಪೆನು.
ತುಂಬಾ ಸುಂದರ ಮತ್ತು ಸರಳ ವಾಗಿದೇರಿ,
ಗುರುವಿನ ಕುರಿತು ಬರೆದ ಕವಿತೆ,
ಅದ್ಭುತವಾಗಿ ಮೂಡಿಬಂದಿದೆ ರಿ
ಶಬ್ದಗಳು ಹೃದಯದಿಂದ,
ನಿಮ್ಮ ಅಮೃತ ಹಸ್ತ ದಲ್ಲಿ ಮಾಮಾ ಜೀ…..