ಕಾವ್ಯ ಸಂಗಾತಿ
ಕೊರವಂಜಿ…!
ದೇವರಾಜ್ ಹುಣಸಿಕಟ್ಟಿ
ಆ ಸಂಜೆ
ಎದುರುಗೊಂಡಳೊಬ್ಬ
ಕೊರವಂಜಿ……!
ಜಡೆಗೆ ಡಾಳವಾಗಿ
ಕಟ್ಟಿದ ಕೇದಿಗೆ…
ಅಗಿದ ಎಲೆಯ ಕೆಂಪು
ಹೂವ್ ದಳದ ತುಟಿಗೆ…
ಮುತ್ತು ಮಣಿಗಳ
ಹಾರ ಕೊರಳಲ್ಲಿ…
ಶಂಖ ಪುಷ್ಪದ ಬುಟ್ಟಿ
ಸುತ್ತಿ ಕಟ್ಟಿದ ಕೋಲು
ಕೈಯಲ್ಲಿ…
ಬಿಟ್ಟ ಕಣ್ಣು ಬಿಟ್ಟಂತೆ
ಹಿಡಿದಿಡುವಳು ನುಡಿದು
ಅಂತೆ ಕಂತೆ…
ನಂಜು ಏರುವುದಿಲ್ಲ
ಅವಳ ಮಾತಿಗೆ..
ಕನಸುಗಳನೇ ಬಿಗಿದು
ಕಟ್ಟಿದ್ದಾಳೆ ಸೆರಗಿಗೆ…
ನಗುವಳು
ಕೊಲ್ಮಿoಚ ಕಣ್ಣಲ್ಲಿ
ಅಮುಕಿಸಿ….
ಬೆಳಕ ಬೆಳದಿಂಗಳ
ತುಟಿಯಲಿ ಚಿಮುಕಿಸಿ….
ಹೇಳುವಳು ಜಾತಕವ
ತವಕದಿ ಕೇಳಿ…
ಕಳೆವಳು ಸೂತಕವ
ಕೊರವಂಜಿ ನೂರೆಂಟು
ಬಗೆಯಲಿ ಹೇಳಿ….
ಅವಳು ಹೇಳಿದ್ದೆಲ್ಲ
ಒಗಟು…..
ಹಾವು ಹಲ್ಲಿ ಏಡಿ
ಬಿಡಿ…
ಹೂವು ಕಾಯಿ ಹಣ್ಣು
ಇನ್ನೂ ಏನೇನೋ
ಉಸಿರಿದಾಗಲೂ…
ಹತ್ತಿ ಇಳಿಸಿ ಬಿಡುತ್ತಾಳೆ
ಹತ್ತೆoಟು ವರ್ಷ….
ಸದ್ದಿಲ್ಲದೇ ಬಿಚ್ಚಿಡುತ್ತಾಳೆ
ನೂರೆಂಟು ಜನ್ಮಾoತರದ
ರಹಸ್ಯ…..!!