ಕಾವ್ಯ ಸಂಗಾತಿ
ಗೊಬ್ಬರದೆದೆಯ ಮೇಲೆ ಬೀಜ ಬಿತ್ತಬೇಕಿದೆ
ಡಾ.ಪುಷ್ಪಾ ಶಲವಡಿಮಠ
ಸತ್ತು ಹೋದವರೇ
ಮಣ್ಣಲಿ ಮಣ್ಣಾದಿರಿ
ನೆನಪುಗಳ ಹಂದರವನೆ
ಹಾಕಿ ಹೊದಿಸಿ ಹೋದಿರಿ
ಸತ್ತು ಹೋದವರೇ
ಬದುಕಿದ ನಮ್ಮಗಳ
ಕೊರಗಿಸಿ ಸುಟ್ಟು ಸುಣ್ಣವಾಗಿಸಿದಿರಿ
ಆದರ್ಶಗಳ ಮೂಟೆ ಬಿಟ್ಟು ಹೋದಿರಿ
ಸತ್ತು ಹೋದವರೇ
ನಶ್ವರ ಬದುಕಿಗೆ ಪಾಠವಾದಿರಿ
ಇರುವಷ್ಟು ದಿನ ಪ್ರೀತಿ ಹಂಚಿದಿರಿ
ಕಣ್ಣ ಹನಿ ಆರಿದರೂ ಕಣ್ಣಗೊಂಬೆಯಾದಿರಿ
ಸತ್ತು ಹೋದವರೇ
ಮಸಣದವರೆಗೆ ಕಳುಹ ಬಂದವರು ನಾವು
ಸಮಾಧಿಯೊಳಗೆ ಇಣುಕಲಾರೆವು
ಸವಿನೆನಪುಗಳ ಹೂಳಲಾರದಾದೆವು
ಸತ್ತು ಹೋದವರೇ
ಬದುಕಿದ ನಾವುಗಳು ಜಾತಿಮತಪಂಥ
ದ್ವೇಷಾಸೂಯೆ ಮೀರಬೇಕಿದೆ
ಗಡಿಗಳಾಚೆ ಕೈಯ ಚಾಚಬೇಕಿದೆ
ಸತ್ತ ಮರುಗಳಿಗೆ ಒಯ್ಯುವುದಾದರೂ ಏನಿದೇ?
ಸತ್ತು ಹೋದವರೇ
ರಕ್ತಮಾಂಸಮಜ್ಜೆಯ ದೇಹ ಕಂದುವುದು
ಕೊಳೆತು ಗೊಬ್ಬರವಾಗುವುದು
ಗೊಬ್ಬರದೆದೆಯ ಮೇಲೆ ಬೀಜ ಬಿತ್ತಬೇಕಿದೆ
ಸತ್ತು ಹೋದವರೇ
ಸತ್ತು ಹೋದವರಲ್ಲ ನೀವು
ಬೀಜ ಬಿತ್ತಿ ಮನುಜಮತದ ಧ್ವಜವ ನೆಟ್ಟವರು
ಸತ್ತು ಬದುಕುತಿರುವವರಿಗೆ ಬದುಕಲು ಕಲಿಸಿದವರು
…ಮ್ಯಾಡಮ್❤