ವಚನ ವಲ್ಲರಿ ೧

ಲೇಖನ ಸಂಗಾತಿ

ವಚನ ವಲ್ಲರಿ

ವಚನ ಸಾಹಿತ್ಯ ,ಸಾಹಿತ್ಯ ಎನ್ನುವುದಕ್ಕಿಂತ ಅದೊಂದು ಚಳವಳಿ- ಕ್ರಾಂತಿ. ಕರ್ನಾಟಕದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಒಂದು ಸಾಮೂಹಿಕವಾದ ಸಮಗ್ರ ಕ್ರಾಂತಿಗೆ ಕಾರಣರಾದವರು ಹನ್ನೆರಡನೇ ಶತಮಾನದ ಶಿವಶರಣರು.ಅವರ ಕೇಂದ್ರಬಿಂದು ಶರಣಶ್ರೇಷ್ಠ ಬಸವಣ್ಣನವರು.

ವಚನ ಶಬ್ದಕ್ಕೆ ಇಲ್ಲಿ ಗದ್ಯಸಾಹಿತ್ಯ ಎಂದು ಅರ್ಥ ಅಲ್ಲ.’ ಪ್ರತಿಜ್ಞೆ-ಆತ್ಮಸಾಕ್ಷಿಯ ಮಾತು’ ಎಂದರ್ಥ. ನುಡಿದಂತೆ ನಡೆದ ಆತ್ಮಸಾಕ್ಷಿಯ ವಾಣಿ ವಚನ ಎನಿಸುತ್ತದೆ. ವಚನಗಳು ಅನುಭಾವಿಯ ಸಾಹಿತ್ಯ. ತಮ್ಮ ಚಿಂತನೆಯನ್ನು ಹೃದಯದಿಂದ ಹೃದಯಕ್ಕೆ ಮುಟ್ಟುವಂತೆ ಹೇಳುವ ಬಿಡಿಮಾತುಗಳು.ಮೂಲತಃ ವಚನನಿಧಿ ಜನರಿಂದ ಜನರಿಗಾಗಿ ಹುಟ್ಟಿ ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯ. ಬೈಬಲ್,ಕುರಾನ್,ಬುದ್ಧನ ತ್ರಿಪಿಟಕಗಳಂತೆ ಉತ್ತರಕಾಲೀನ ಸಂಕಲನಗಳಾಗಿವೆ.

ವಚನಕಾರರು ಉದಯವಾಗುವ ಕಾಲದಲ್ಲಿ ಕರ್ನಾಟಕದಲ್ಲಿ ಮತಧರ್ಮಗಳ ಹೆಸರಿನಲ್ಲಿ ಪೂಜೆ ಸಂಪ್ರದಾಯಗಳ ಸೋಗಿನಲ್ಲಿ ಅನೈತಿಕ ಆಚಾರಗಳು ವ್ಯಾಪಕವಾಗಿದ್ದವು. ಬಸವಣ್ಣನವರಿಗೆ ಸಮಾಜ ಒಂದು ರೋಗಗ್ರಸ್ತ ,ದೃಷ್ಟಿಹೀನ,ಧ್ಯೇಯಹೀನ,ಕುಂಟುವ ವಿಲಕ್ಷಣ ರೋಗಿಯಂತೆ ಕಂಡು ಬಂದಿತು.

ತುಳಿತಕ್ಕೊಳಗಾದ ಶೂದ್ರರು ಮತ್ತು ಅಸ್ಪೃಶ್ಯರಿಗಿಂತ ಹೆಚ್ಚು ನೋವಾದದ್ದು ಬಸವಣ್ಣನವರಿಗೆ.ಈ ವ್ಯವಸ್ಥೆ ಯನ್ನು ಕೊನೆಗಾಣಿಸಲು ಅವರು ನಿಶ್ಚಯಿಸಿ ಶರಣರೊಡಗೂಡಿ ಕೆಳವರ್ಗದವರಿಗೆ ನ್ಯಾಯವನ್ನು ಒದಗಿಸಲು,ವೈದಿಕ ಸಾಹಿತ್ಯದ ಪೊಳ್ಳು ಅಂಶಗಳನ್ನು ನಿರ್ನಾಮ ಮಾಡಿ ಹೊಸ ಸಾಹಿತ್ಯ ನಿರ್ಮಾಣ ಮಾಡಬೇಕೆಂಬ ಕಾರ್ಯವೇ ಶರಣ ಚಳುವಳಿ ಯಾ ವಚನ ಚಳುವಳಿ .ಇದರಲ್ಲಿ ಪುರುಷರಷ್ಟೇ ಅಲ್ಲದೆ ಮಹಿಳೆಯರೂ ಇದ್ದುದು ಇನ್ನೊಂದು ವಿಶೇಷ!


ಹಮೀದಾ ಬೇಗಂ

Leave a Reply

Back To Top