ಮಹಿಳಾದಿನದ ವಿಶೇಷ

ಬೆಳಕಿನ ರಂಗೋಲಿ

Photo of Woman Wearing Denim Jacket

ಅಂಜನಾ ಹೆಗಡೆ

ಏಳಯ್ಯ ಹನುಮಂತ ಎಷ್ಟು ನಿದ್ರೆ….
ಬಚ್ಚಲೊಲೆಯ ಮಸಿಬೂದಿ
ಟೂತ್ ಪೌಡರ್ ಆಗಿ
ಹೊಳೆವ ಹಲ್ಲು
ಕೊರಳಗುಂಟ ಸುತ್ತಿಕೊಂಡ
ಲಕ್ಷ್ಮಿತಾಳಿ
ಸೆರಗೊಳಗೆ ಸೇರಿಸುತ್ತಾ
ದೇವರನ್ನೆಬ್ಬಿಸುತ್ತಾಳೆ ಅಜ್ಜಿ
ಅವಳ ಗಂಟಲು ನಡುಗುವುದಿಲ್ಲ
ಹೂ ಬಿಡಿಸುತ್ತಿದ್ದಾಳೆ ಅಮ್ಮ
ಒಲೆಯ ಮೇಲೆ ಕುದಿವ
ನೀರಿನ ಶಾಖ
ಅವಳ ಎದೆಗೆ ಇಳಿಯುವುದಿಲ್ಲ
ಜೀನ್ಸ್ ಪ್ಯಾಂಟ್ ಸರಿಪಡಿಸುತ್ತ ಮೊಮ್ಮಗಳು
ಬಣ್ಣದ ರಂಗೋಲಿ ಬಿಡಿಸುತ್ತಿದ್ದಾಳೆ
ಅವಳ ನಗು ಮಾಸುವುದಿಲ್ಲ

ಮಾರುತಿ ಮಂದಿರದ ಎದುರು
ಕೈ ಮುಗಿದು ನಿಂತವಳ
ಕೆಂಪು ನೈಲ್ ಪೋಲಿಶ್ ಹೊಳೆಯುತ್ತಿದೆ
ಕಣ್ಣುಮುಚ್ಚಿ ಪ್ರಸಾದಕ್ಕೆ ಕೈಚಾಚಿದ್ದಾಳೆ
ನವಗ್ರಹಗಳ ಸುತ್ತುವ
ನುಣುಪಾದ ಪಾದಗಳು
ಹೈ ಹೀಲ್ಸ್ ಮರೆತಿವೆ
“ಚಪ್ಪಲಿಗಳನ್ನು ಸ್ಟ್ಯಾಂಡ್ನಲ್ಲಿಯೇ ಬಿಡಿ”
ಚಪ್ಪಲಿರಾಶಿಯ ಮಧ್ಯದಲ್ಲಿ
ಚಿಲ್ಲರೆ ಎಣಿಸುವವ ತಣ್ಣಗೆ ಕುಳಿತಿದ್ದಾನೆ….
ಜಗವ ಕಾಯುವ ಗತ್ತಿನಲ್ಲಿ

ರಾತ್ರಿಪಾಳಿಯ ಕೆಲಸ ಮುಗಿಸಿ
ಮೇಕಪ್ ಅಳಿಸುತ್ತ
ಅವಳು ಮೆಲ್ಲಗೆ ಗುನುಗುತ್ತಾಳೆ….
ಮೆರೋ ಮನ ರಾಮ ಹೀ ರಾಮ ರಟೆ
ಪಕ್ಕ ಕೂತು
ಕೀಬೋರ್ಡ್ ಮೇಲೆ ಕೈಯಾಡಿಸುವವ
ನೆನಪಾಗಿ ಬಂದು ತಲೆ ಸವರಿದ್ದಾನೆ
ಕನಸಿನ ರಂಗೋಲಿ….
ಕೆನ್ನೆಮೇಲೊಂದು
ಕರುಳಿನೊಳಗೊಂದು
ಬಣ್ಣಬಣ್ಣದ ಎಳೆ

ಏಳು ರಾಮನ ಬಂಟ ಬೆಳಗಾಯಿತು….

*****

Leave a Reply

Back To Top