ಹಣತೆ ಹಚ್ಚುತ್ತಾಳೆ
ಸುಮಂಗಳ ಮೂರ್ತಿ
ಹಣತೆ ಹಚ್ಚುತ್ತಾಳೆ ಅವಳು
ಪ್ರತಿದಿನವೂ,ತಿಂಗಳನಂತೆ
ಮಬ್ಬುಗಟ್ಟಿದ ಕತ್ತಲನ್ನು
ನಂದಿಸುವ ಸಲುವಾಗಿ
ಹಣತೆ ಹಚ್ಚುತ್ತಾಳೆ ಅವಳು
ಪ್ರತಿ ಕ್ಷಣವೂ,ಗೋವರ್ಧನ
ಗಿರಿಯಂತೆ
ಭರವಸೆಯ ಭತ್ತ
ಅಂಕುರವಾಗುವ ಸಲುವಾಗಿ
ಹಣತೆ ಹಚ್ಚುತ್ತಾಳೆ ಅವಳು
ಪ್ರತಿ ಬೆಳಗೂ,ನೇಸರನ
ನಗುವಂತೆ
ಹೆಪ್ಪುಗಟ್ಟಿದ ನೋವನು
ಕರಗಿಸುವ ಸಲುವಾಗಿ
ಹಣತೆ ಹಚ್ಚುತ್ತಾಳೆ ಅವಳು
ಪ್ರತಿ ಇರುಳೂ,ತಂಗಾಳಿಯಂತೆ
ದಣಿದ ಮನಸ್ಸಿಗೆ
ಮುಲಾಮಾಗುವ ಸಲುವಾಗಿ
ಹಣತೆ ಹಚ್ಚುತ್ತಾಳೆ ಅವಳು
ಪ್ರತಿ ಹೆಜ್ಜೆಗೂ,ಮಣ್ಣಿನ
ಘಮದಂತೆ
ಚಿತೆಗೆ ನೂಕಿದ
ಚಿಂತನೆಯ ಹಾದಿಗೆ
ದೀವಿಗೆಯಾಗುವ ಸಲುವಾಗಿ
ಹಣತೆ ಹಚ್ಚುತ್ತಾಳೆ ಅವಳು
ಪ್ರತಿ ಅಕ್ಷರದಲ್ಲೂ,ಜೀವಜಲದಂತೆ
ಅರಿವಿನ ಹಸಿವಿಗೆ
ಅನ್ನವಾಗುವ ಸಲುವಾಗಿ
ಹಣತೆ ಹಚ್ಚುತ್ತಾಳೆ ಅವಳು
ಪ್ರತಿ ಕನವರಿಕೆಯಲೂ,ತಾಯಿಯಂತೆ
ಕುಟುಂಬದ ಘನತೆಯನ್ನು
ಜೋಪಾನ ಮಾಡುವ ಸಲುವಾಗಿ
ಹಣತೆ ಹಚ್ಚುತ್ತಾಳೆ ಅವಳು
ಮಳೆ ಹನಿಗಳ ಚುಂಬನದಂತೆ
ವಿಜ್ಞಾನದ ಬೆಳಕನು ಹರಡಿ
ಮೌಢ್ಯದ ಕೊಳೆಯನು
ತೊಳೆಯುವ ಸಲುವಾಗಿ
ಹಣತೆ ಹಚ್ಚುತ್ತಾಳೆ ಅವಳು
ನೆಲದವ್ವನ ಒಲವಂತೆ
ಸಮಾನತೆಯ ಹರಿಸುವ
ಸಲುವಾಗಿ
ಹಣತೆ ಹಚ್ಚುತ್ತಾಳೆ ಅವಳು
ಪ್ರೀತಿಯಿಂದ ……
ಕರುಣೆಯಿಂದ……..
ಶಾಂತಿಯಿಂದ……..
ತಾನೇ ಸುಟ್ಟು ಕರಕಲಾದರೂ
ಅರಿವಾಗದ ಅನಂತತೆಯಲಿ
ಹಣತೆ ಹಚ್ಚುತ್ತಾಳೆ ಅವಳು!
ಇಲ್ಲಿ ಎಲ್ಲವೂ ಬರಿದಾದರೂ
ಹಣತೆಯ ಬೆಳಗು ಬೆರಗಾಗದೆ
ಮೆರಗಾಗಲಿ ಎಂಬ ಧ್ಯೇಯದಿಂದ….
ಹಣತೆ ಹಚ್ಚುತ್ತಾಳೆ ಅವಳು!
*******