ಹುಳಿಯಾರ್ ಷಬ್ಬೀರ್ ಕವಿತೆ-ಜಾತಿ

ಕಾವ್ಯ ಸಂಗಾತಿ

ಜಾತಿ

ಹುಳಿಯಾರ್ ಷಬ್ಬೀರ್

ಅಪ್ಪನ ಸಾವು ದಿಕ್ಕು
ತೋಚದ ಅವ್ವ
ಪೂರ್ವವೇ ಪಶ್ಚಿಮವಾಗಿ
ಉತ್ತರವೇ ದಕ್ಷಿಣವಾಗಿ
ನಾಲ್ಕು ದಿಕ್ಕುಗಳು ಕಣ್ಣೀರಿನಿಂದ
ಕೂಗುವ ಆರ್ತನಾದ

ಬಹುಕಾಲದ ನೆರಳು
ನೀಡಿದ ಆಲದ ಮರ
ಬಿಳಲು ಬಿಟ್ಟು
ಮಕಾಡೆಯಾಗಿರುವುದರ ಕಂಡು
ಮನಸ್ಸನ್ನೆಲ್ಲ ಯಾರೋ
ಕಿವುಚಿದಂತಾಗಿ

ಅಲ್ಲೋಲಕಲ್ಲೋಲ
ಆಕಾಶದಗಲ ಹಂಚಿದ ಪ್ರೀತಿ
ಮುಂದೆ ನಿಂತು ಅಣಕಿಸುತ್ತಾ
ಅಂತರ್ಜಾತಿಯಲ್ಲಿ ಹುಟ್ಟಿದ
ನಾನು ಹೇಗೆ ಶವ ಸಂಸ್ಕಾರ
ಮಾಡಲಿ..?
ಅತ್ತರ್ ಹಾಕಲೋ..?
ಚಟ್ಟ ಕಟ್ಟಲೋ..?
ಮಲ್ಲಿಗೆಯಿಂದ ಶೃಂಗರಿಸಲೋ..?

ಇವ ನಮ್ಮವ ಇವ ನಮ್ಮವ
ನಮ್ಮವನಂತೆ ಶೃಂಗರಿಸಿ
ಏ..!! ನಮ್ಮಂತೆ ಮಾಡಿ
ಅಪ್ಪ ಅಪ್ಪನೇ ನೀನೇಕೆ
ನನ್ನವ್ವನನ್ನು ಪ್ರೀತಿಸಿದೆ
ನನ್ನ ಜನುಮದಾತನಾದೆ

ಇವರಿಗೆಲ್ಲ ಏನು ಗೊತ್ತು
ನಿನ್ನ ಇರುವೆಯಂತಹ ಪರಿಶ್ರಮ
ನಿಸ್ವಾರ್ಥ ಪ್ರೇಮ
ಎಲ್ಲರೊಳಗೊಂದಾಗುವ
ಅಂತಃಕರಣ…
ಮಸಣದಲ್ಲೂ ಜಾತಿ ರಾಜಕೀಯವೇ..?
ನೆಮ್ಮದಿಯಾಗಿ ನಮ್ಮ ಅಳಲು
ಹಂಚಿಕೊಳ್ಳಲು ಬಿಡಲಾರದ
ಜಾತಿಯ ಸಜಾತಿಯ
ಧೂರ್ತ ರಿಗೆ ನನ್ನದೊಂದು ಧಿಕ್ಕಾರ..


Leave a Reply

Back To Top