ನಾನೆಂದೂ ಓಡುವುದಿಲ್ಲ.
ಚೈತ್ರ ಶಿವಯೋಗಿಮಠ
ಒಂದ್ಹತ್ತು ಚಪಾತಿಯನು ತೀಡಿ
ಕಾದ ಎಣ್ಣೆಯಲಿ ಸಾಸಿವೆ ಜೀರಿಗೆ
ಚಟ ಪಟ ಎನಿಸಿ ಕರಿಬೇವು ಚೊರ್ ಎನಿಸಿ
ಒಂದು ಪಲ್ಯ ಮಾಡಿ, ದೌಡಾಯಿಸಬೇಕಿದೆ
ನನ್ನ ಕನಸುಗಳ ಬೆಂಬತ್ತಲು!
ನಿಮ್ಮ ಉದರಕಾಗಿಯೇ ಮಾಡುವೀ
ಮಹತ್ಕಾರ್ಯದಲಿ ಕೊಂಚ ಕೈ ಜೋಡಿಸಿ
ತಪ್ಪೇನಿಲ್ಲ!
ವಯಸ್ಸು ದೇಹಕ್ಕೆ ಹೊರತು ಮನಸ್ಸಿಗಲ್ಲ!
ಒಂದೆರಡು ಸವಿಮಾತು ಒಂದು ಮುಗುಳುನಗೆ
ಇವಿಷ್ಟೇ! ಬೀಳ್ಕೊಡಿ ನನ್ನನ್ನೂ
ಒಂದು ದೊಡ್ಡ ದಿನ ನನ್ನ ಮುಂದಿದೆ!
ಆಗೊಮ್ಮೆ ಈಗೊಮ್ಮೆ ಜೀನ್ಸ್ ಧರಿಸುವೆ!
ತುಸು ತುಟಿಗೆ ಬಣ್ಣ ಹಚ್ಚಿ ಮುಂಗುರುಳ ತೀಡುವೆ
ಅದಕ್ಕೂ ಗೊಣಗಬೇಡಿ “ಮಾರ್ಡರ್ನ್ ಮಾರಿ”ಎಂದು
ಯಾಕೆಂದರೆ ನನಗೆ ಸೀರೆಯೇ ಇನ್ನೂ ಅಚ್ಚು ಮೆಚ್ಚು
ನನಗೆ ಮಕ್ಕಳ ನೋಡಿಕೊಳ್ಳಲು ಕಿಂಚಿತ್
ಬೇಸರವಿಲ್ಲ! ಒಮ್ಮೊಮ್ಮೆ ನನಗಾಗಿ ಒಂದು ತಾಸು,
ಒಂದೇ ಒಂದು ತಾಸು ಸಂಭಾಳಿಸಿ ಅವುಗಳನ್ನ
ನನ್ನ ನೆಚ್ಚಿನ ಪುಸ್ತಕ ಹಿಡಿದು ಕಾಫೀ ಹೀರುವೆ!
ಆಗೊಮ್ಮೆ ಈಗೊಮ್ಮೆ ಗೋಷ್ಠಿಗಳಿಗೆ ಹೋಗುವೆ,
ಹೊಸ ವಿಚಾರಧಾರೆ ನನಗೂ ಹಿಡಿಸುವುದು.
ಅನಾಯಾಸ ಮಹಿಳಾವಾದಿ, ಆ ವಾದಿ ಈ ವಾದಿಯೆಂದು
ಮೂಲವ್ಯಾಧಿ ತರಿಸಿಕೊಳ್ಳಬೇಡಿ!
ನನ್ನ ಬೇರುಗಳು ಗಟ್ಟಿಯಾಗೇ ಇವೆ!
ಎಲ್ಲವನೂ ಸಂಭಾಳಿಸುವ ಶಕ್ತಿಯಿರುವ ನನ್ನ
ಒಂದೇ ಕಡೆ ಸೀಮಿತಗೊಳಿಸಿ ಅಲ್ಲಿಗೆ
ಅಂಟಿಸಲು ಪ್ರಯತ್ನಿಸದಿರಿ!!
ಹಾಗಂತ ನನ್ನ ಜವಾಬ್ದಾರಿಗಳಿಂದ ನಾನೆಂದೂ ಓಡುವುದಿಲ್ಲ!!
*********
ನಿಜ…. ಜವಾಬ್ದಾರಿ ಕಳಚಿಕೊಂಡು ಓಡುವುದಿಲ್ಲ ನಾವು