ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ಗಬ್ಬೂರ್ ಅವರ ಗಜಲ್ ಗಳಲ್ಲಿ

ಸಾತ್ವಿಕ ಬಂಡಾಯ..

ಗಜಲ್ ಎಂದರೆ ಅದೇನೋ ರೋಮಾಂಚನ ಮನದಲಿ. ಇಂಥಹ ಗಜಲ್ ಪ್ರೇಮಿಗಳಿಗೆ ಮೇರಾ ದಿಲ್ ಸೆ ಆದಾಬ್ ಅರ್ಜ್ ಹೈ.. ಪ್ರತಿ ಗುರುವಾರ ಒಬ್ಬೊಬ್ಬ ಗಜಲ್ ಕಾರ ಕುರಿತು ಬರೆಯುತ್ತ ಗಜಲ್ ಗುಲ್ದಸ್ತಾ ಹಿಡಿದು ಬರುತ್ತಿರುವೆ. ಆ ಗುಲ್ದಸ್ತಾದಲ್ಲಿ ಆಕರ್ಷಿಸಕ ಮಹೆಕ್ ಹೊಂದಿರುವ ಲತೆಗಳಿವೆ. ನೀವು ನಿರೀಕ್ಷಿಸುತ್ತಿರುವ ಗಜಲ್ ಬೆಳದಿಂಗಳೊಂದಿಗೆ, ನಿಮ್ಮ ಮುಂದೆ…!! 

ಅವರಿಗೂ ಜೀವನದ ಕೆಲವು ಅನುಭವಗಳು ಆಗಿರಬಹುದು

ಯಾರು ಹೇಳುತ್ತಿದ್ದಾರೆ ತಾವು ಸಾಯಲು ಬಯಸುತಿದ್ದೇವೆಂದು”

ವಾಲಿ ಆಸಿ

        ಭಾಷೆ ಬೌದ್ಧಿಕತೆಯ ಸೆಲೆಯಲ್ಲಿ ಚಿಗುರಿದ ತುಂತುರು ಹನಿ. ಭಾಷೆಯ ಅವಿಭಾಜ್ಯ ಅಂಗವಾದ ಪದಗಳು ಅಗಾಧವಾದ ಶಕ್ತಿಯನ್ನು ಹೊಂದಿವೆ. ಎಷ್ಟೋಸಲ ಪದಗಳು ವ್ಯಕ್ತಿಯನ್ನು, ಅದರಲ್ಲೂ ದುರ್ಬಲ ಹೃದಯದವರನ್ನು ನಿಯಂತ್ರಿಸುತ್ತವೆ. ಒಂದಂತೂ ಸತ್ಯ, ಪದಗಳು ನಮ್ಮನ್ನು ನಿಯಂತ್ರಿಸಿದರೆ ಎಲ್ಲರೂ ನಮ್ಮನ್ನು ನಿಯಂತ್ರಿಸಬಹುದು!! ಈ ದಿಸೆಯಲ್ಲಿ ಮನುಷ್ಯ ಬೌದ್ಧಿಕ ದಾಸ್ಯಕ್ಕೆ ಗುರಿಯಾಗಬಾರದು. ಆದಾಗ್ಯೂ ಅನಾದಿ ಕಾಲದಿಂದಲೂ ಬೌದ್ಧಿಕ ಗುಲಾಮಗಿರಿ ನಮ್ಮ ಸಮಾಜವನ್ನು ಆವರಿಸಿತ್ತು, ಆವರಿಸಿದೆ; ಮುಂದೆಯೂ ಆವರಿಸಬಹುದು. ಮನುಷ್ಯ ಎರಡು ಶಕ್ತಿಗಳ ಅಂದರೆ, ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಉತ್ಪನ್ನ. ಇದು ಅವನನ್ನು ಯೋಚಿಸುವಂತೆ ಮಾಡುತ್ತದೆ. ಕರ್ಮವು ಅದೃಷ್ಟವಲ್ಲ, ಏಕೆಂದರೆ ಮನುಷ್ಯನು ಸ್ವತಂತ್ರ ಇಚ್ಛೆಯೊಂದಿಗೆ ವರ್ತಿಸುತ್ತಾನೆ. ತನ್ನದೇ ಆದ ಹಣೆಬರಹವನ್ನು ಸೃಷ್ಟಿಸುತ್ತಾನೆ. ಈ ನೆಲೆಯಲ್ಲಿ “ಸತ್ಯಕ್ಕೆ ಮೊದಲ ಪ್ರತಿಕ್ರಿಯೆ ದ್ವೇಷ” ಎಂಬ ಉತ್ತರ ಆಫ್ರಿಕಾದ ಕಾರ್ತೇಜ್‌ನ ಲೇಖಕ ಟೆರ್ಟುಲಿಯನ್ ರವರ ಹೇಳಿಕೆ ಅಕ್ಷರಶಃ ಈ ಸಂಸಾರವನ್ನು ಆಳುತ್ತಿದೆ. ಕ್ರಿಯೆ ಮತ್ತು ಪ್ರತಿಕ್ರಿಯೆಯಿಂದ ನಾವು ನಮ್ಮ ಆಲೋಚನೆಗಳು ಮತ್ತು ಮಾನಸಿಕ ಸ್ಥಿತಿಗಳಿಗೆ ಅನುಗುಣವಾಗಿ ಬಲಶಾಲಿಯಾಗುತ್ತೇವೆ ಅಥವಾ ದುರ್ಬಲರಾಗುತ್ತೇವೆ. ಭಯ ಎನ್ನುವುದು ಈ ಮನಸ್ಸಿನ ಮಾರಣಾಂತಿಕ ರಾತ್ರಿಯ ಛಾಯೆಯಾಗಿದೆ. ನಾವು ಕ್ರಿಯೆಯ ಜೀವನಕ್ಕಾಗಿ ಹೋರಾಡಬೇಕೆ ಹೊರತು ಪ್ರತಿಕ್ರಿಯೆಗಾಗಿಯಲ್ಲ. ಇಂಥಹ ಹತ್ತು ಹಲವಾರು ವಿಷಯಗಳು ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸುತ್ತ ಬಂದಿವೆ. ಇದರ ಹೆಜ್ಜೆ ಗುರುತುಗಳಾಗಿ ‘ಬಂಡಾಯ’ ಚಳುವಳಿಯತ್ತ ಗಮನ ಹರಿಸಬಹುದು. ಈ ಬಂಡಾಯದ ಬಿಸಿ ಮೋಹಕ ಬೆಡಗಿ ಗಜಲ್ ಗೂ ತಟ್ಟಿದೆ. ಇಂಥಹ ಬಂಡಾಯದ ದಾರಿಯಲ್ಲಿ ತಮ್ಮ ಛಾಪು ಮೂಡಿಸಿರುವ, ಮೂಡಿಸುತ್ತಿರುವ ಗಜಲ್ ಕಾರರಲ್ಲಿ ಶ್ರೀ ರಮೇಶ್ ಗಬ್ಬೂರ್ ಅವರೂ ಒಬ್ಬರು!!

       ಅಪ್ಪಟ ದೇಸಿ ಪ್ರತಿಭೆ ರಮೇಶ ಗಬ್ಬೂರ ಅವರು ಶ್ರೀ ಪಿಟೀಲು ಯಂಕಪ್ಪ ಹಾಗೂ ಶ್ರೀಮತಿ ಮುದ್ದಮ್ಮ ದಂಪತಿಗಳ ಮಗನಾಗಿ ಜನಿಸಿದ್ದು ೧೯೬೮ ರ ಜೂನ್‌ ೫ರಂದು ರಾಯಚೂರು ಜಿಲ್ಲೆಯ ಗಬ್ಬೂರಿನಲ್ಲಿ. ಇವರು ತಮ್ಮ ಬಾಲ್ಯ ಶಿಕ್ಷಣವನ್ನು ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ, ಪದವಿ ಪೂರ್ವ, ಪದವಿ ಶಿಕ್ಷಣವನ್ನು ರಾಯಚೂರಿನಲ್ಲಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಮ್.ಎ., ಬಿ.ಇಡಿ. ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಹಿಂದುಸ್ತಾನಿ ಸಂಗೀತದ ತಬಲಾ ಸೀನಿಯರ್ ಶಿಕ್ಷಣವನ್ನು ಪೂರೈಸಿರುವ ಇವರು ಉತ್ತಮ ಗಾಯಕರೂ ಹೌದು. ಇವರು ರಾಯಚೂರು ತಾಲೂಕಿನ ಸ.ಹಿ.ಪ್ರಾ.ಶಾಲೆ ಪಲವಲದೊಡ್ಡಿಯಲ್ಲಿ ಹದಿಮೂರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ರಾಯಚೂರು ಬಿ.ಆರ್.ಸಿ. ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತವಾಗಿ ಶ್ರೀಯುತರು ಗಂಗಾವತಿಯ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಗ್ರಂಥ ಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಶಾಲಾ ದಿನಗಳಿಂದಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಗಬ್ಬೂರ್ ಅವರು ಸಾಹಿತ್ಯ ಕೃಷಿ ಹಾಗೂ ಸಾಮಾಜಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದು, ಜಾಗೃತ ಗೀತೆ ರಚನೆ ಹಾಗೂ ಹಾಡುಗಾರಿಕೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಇದರೊಂದಿಗೆ ರಂಗಭೂಮಿಯ ಕಲಾವಿದರಾಗಿಯೂ ಬಣ್ಣ ಹಚ್ಚಿದ್ದಾರೆ. ಸಮುದಾಯ ನಾಟಕಗಳಲ್ಲಿ ನಟನೆ, ಜಾನಪದ ಹಾಡುಗಾರಿಕೆ, ಮಕ್ಕಳ ನಾಟಕ ರಚನೆ ಮತ್ತು ನಿರ್ದೇಶನ ಮಾಡಿರುವ ಇವರು ಚಾರಣದ ಹವ್ಯಾಸವನ್ನೂ ಹೊಂದಿದ್ದು ಕರ್ನಾಟಕದ ಪಶ್ಚಿಮ ಘಟ್ಟ, ಡಾರ್ಜಿಲಿಂಗ್ ನ ‘ಸಂದಕ್ಟು’, ಶೇರ್ಪಾಸ್ ಚಾರಣವನ್ನು ಯಶಸ್ವಿಯಾಗಿ ಮಾಡಿದ್ದಾರೆ.

     ಬಹುರೂಪಿ ಆಸಕ್ತಿ, ಹವ್ಯಾಸಗಳನ್ನು ಹೊಂದಿರುವ ರಮೇಶ್ ಗಬ್ಬೂರ್ ಅವರು ಕಾವ್ಯ, ನಾಟಕ, ಲೇಖನ, ವಿಮರ್ಶೆ, ವ್ಯಕ್ತಿ ಪರಿಚಯ ಮತ್ತು ಗಜಲ್ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅವುಗಳಲ್ಲಿ ‘ಗೂನು ಬೆನ್ನಿನ ಗದ್ದೆ’, ‘ಅಲೆಮಾರಿಯ ಹಾಡು’, ‘ಕಾಮ್ರೆಡ್‌ ಬಸವಣ್ಣ’, ‘ಸಂಜೀವಪ್ಪ ಗಬ್ಬೂರ’, ‘ಒಲಿದಂತೆ ಹಾಡುವೆ’, ‘ಅಪರಿಮಿತನ ಕತ್ತಲೆಯೊಳಗೆ ವಿಪರೀತದ ಬೆಳಕು’, ‘ಜನಮನದಂತೆ ಹಾಡುವೆ’….. ಮುಂತಾದ ಕೃತಿಗಳೊಂದಿಗೆ ‘ಗರೀಬ್‌ ಗಜಲ್‌’ ಹಾಗೂ ‘ಗಬ್ಬೂರ್‌ ಗಜಲ್’ ಎಂಬ ಗಜಲ್ ಸಂಕಲನಗಳನ್ನೂ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

     ಸದಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ರಮೇಶ್ ಗಬ್ಬೂರ್ ಅವರ ಬರಹದ ಹಲವು ರೂಪಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶೈಕ್ಷಣಿಕ ರಂಗದಲ್ಲಿ ವಿಶೇಷ ಆಸ್ಥೆ ಹೊಂದಿರುವ ಗಬ್ಬೂರ್ ಅವರು ಶಿಕ್ಷಣ ಇಲಾಖೆ ಆಯೋಜಿಸಿರುವ ಹಲವು ಗೋಷ್ಠಿ, ಕಮ್ಮಟ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಂಡಿದ್ದಾರೆ. ಇದರೊಂದಿಗೆ ದಸರಾ ಕವಿಗೋಷ್ಠಿ, ಆನೆಗೊಂದಿ ಉತ್ಸವ, ಕನಕಗಿರಿ ಉತ್ಸವ, ಅಖಿಲ ಭಾರತ ೮೨ ನೆ ಸಾಹಿತ್ಯ ಸಮ್ಮೇಳನ, ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ಆಂಧ್ರಪ್ರದೇಶದಲ್ಲಿ ನಡೆದ ‘೫ನೆ ಆಂಧ್ರ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದ ದ್ವಿಭಾಷಾ ಕವಿಗೋಷ್ಠಿ, ಬಿಹಾರದ ‘ಹೊರನಾಡು ಉತ್ಸವ’ … ಹೀಗೆ ಅನೇಕ ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ಸಾರಿದ್ದಾರೆ. ಶ್ರೀಯುತರ ವೈವಿಧ್ಯಮಯ ಪ್ರತಿಭೆಯನ್ನು ಗುರುತಿಸಿ ಹತ್ತು ಹಲವಾರು ಸಂಘ, ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಅಖಿಲ ಭಾರತ ೫ ನೆ ದಲಿತ ಸಾಹಿತ್ಯ ಸಮ್ಮೇಳನದ ‘ಲೇಖಕರ ಮೊದಲ ಕೃತಿ’ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಕೊಪ್ಪಳದ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’… ಪ್ರಮುಖವಾಗಿವೆ.

      ಹೃದಯವು ಮಾತನಾಡುವಾಗ ಮನಸ್ಸು ಆಕ್ಷೇಪಿಸಲಾರದು. ನಮ್ಮ ಹೃದಯವು ಬಾಣದಂತೆ. ಯಾವಾಗಲು ಗುರಿಯನ್ನು ಬಯಸುತ್ತಿರುತ್ತದೆ.‌ ಇಲ್ಲಿ ‘ಗುರಿ’ ಎಂದರೆ ಮುದ, ಆನಂದ, ಸಂತೃಪ್ತಿ. ಇಂಥಹ ಹೃದಯದ ಸಾಹಿತ್ಯವೆ ಸಂಗೀತ.‌ ಸಂಗೀತದ ನೆರಳಾಗಿ ಚಿಗುರೊಡೆದ ಗಜಲ್ ಮಾತು ಕೊನೆಗೊಳ್ಳುವ ಸ್ಥಳದಲ್ಲಿ ಉದಯಿಸುತ್ತದೆ. ಇದು ಮೃದುವಾದ, ರೇಷ್ಮೆಯಂತಹ ಭಾವವನ್ನು ಹೊಂದಿದ್ದು, ಬಲವಾದ ಅಶಅರ್ ಗಳಿಂದ ಹೃದಯವನ್ನು ಗ್ರಹಿಸುತ್ತ ದುಃಖವನ್ನು ಶಮನಗೊಳಿಸುತ್ತದೆ. ನಿಜವಾದ ಪ್ರೀತಿಗೆ ಪುರಾವೆಯ ಅಗತ್ಯವಿಲ್ಲ. ಕಣ್ಣುಗಳು ಹೃದಯದ ಭಾವನೆಯನ್ನು ಹೇಳುವಂತೆ ಗಜಲ್ ಗಳು ಭಾವನೆಯ ಝೇಂಕಾರವನ್ನು ಉಸುರುತ್ತವೆ. ಇಂಥಹ ಗಜಲ್ ಗಳು ಪ್ರೀತಿಯಿಂದ ಗಾಯವನ್ನು ಗುಣಪಡಿಸುತ್ತವೆ. ಗಜಲ್ ನಮ್ಮ ಹೃದಯದಲ್ಲಿ ಶಾಂತಿಯ ಸೌಮ್ಯ ಸ್ಪರ್ಶವನ್ನು ತರುತ್ತದೆ. ಈ ದಿಸೆಯಲ್ಲಿ ಗಜಲ್ ಗೋ ರಮೇಶ್ ಗಬ್ಬೂರ್ ಅವರ ಗಜಲ್ ಗಳಲ್ಲಿ ದೀನತೆ, ದಮನಿತರ ಪರವಾಗಿ ಪ್ರತಿಭಟಿಸುವ ಧ್ವನಿ, ಜೀವನ ಶ್ರದ್ಧೆ, ಸಾಮಾಜಿಕ ಕಳಕಳಿ, ಸಮತೆಯ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ತೊಟ್ಟಿಲು, ಶೋಷಣೆಯ  ನಿವಾರಣೆ, ವ್ಯವಸ್ಥೆಯ ವಿಡಂಬನೆ, ಧರ್ಮದ ಎಡಬಿಡಂಗಿತನ, ಸಂಬಂಧಗಳ ಆಲಿಂಗನ, ಬಡತನದ ಬೇಗುದಿ, ಅವಮಾನಗಳ ಮುಳ್ಳುಗಾವಲು, ಭಾವನೆಗಳ ತೊಳಲಾಟ ಹಾಗೂ ಪ್ರೀತಿಯ ವಿವಿಧ ಮಗ್ಗುಲಗಳು ಮುಪ್ಪರಿಗೊಂಡಿವೆ. ಇವರ ಗಜಲ್‌ ಒಳಗಿನ ಮೂಲ ಅಭಿವ್ಯಕ್ತಿ ರೂಪವೇ ಬದುಕಿನ ಹಕ್ಕು. ಜಾತಿಯ ಅಟ್ಟಹಾಸದ ನಡುವೆ ಯಾರದೋ ಕೈಯಲ್ಲಿ ಅಸ್ತ್ರವಾಗಿ ಉಳಿದು ಶ್ರಮ ಸಂಸ್ಕೃತಿಯ ಸಮುದಾಯವು ನಲಿವು ಕಸಿದುಕೊಂಡಿದೆ ಎನ್ನುವುದು ಇವರ ಗಜಲ್‌ ಸಂಕಲನಗಳ ಮೂಲ ಆಶಯವಾಗಿದೆ.

        ನಮ್ಮ ಭಾರತೀಯ ಪರಂಪರೆಯಲ್ಲಿ ‘ಜಾತಿಯತೆ’ ಎನ್ನುವುದು ಅಂದಿಗೂ-ಇಂದಿಗೂ ಒಂದು ‘ಕಪ್ಪುಚುಕ್ಕೆ’ಯಾಗಿಯೇ ಉಳಿದಿದೆ. ದುರಂತವೆಂದರೆ ನಮ್ಮೊಳಗಿನ ರಾಜಕೀಯ, ಸಾಮಾಜಿಕ ಹಿತಾಸಕ್ತಿಗಳು ಇದನ್ನು ಪೋಷಿಸಿಕೊಂಡು ಬರುತ್ತಿರೊದು. ಮೊದಲಿನಷ್ಟು ಇವಾಗ ಇಲ್ಲ ಎಂದು ಹೇಳಬಹುದಾದರೂ ಸಂಪೂರ್ಣ ತೊಲಗಿದೆ ಎಂದು ಹೇಳಲಾಗದು. ಈ ಕೆಳಗಿನ ಷೇರ್ ಗಮನಿಸಿದಾಗ ಜಾತಿಯತೆಯ ಜೊತೆಗೆ ಬಡತನ, ಅನಕ್ಷರತೆ, ಮೌಢ್ಯತೆ, ಅಸಹಾಯಕತೆ…. ಇವುಗಳು ಒಂದಕ್ಕೊಂದು ಬೆಸೆದುಕೊಂಡಿರುವುದು ಮನದಟ್ಟಾಗುತ್ತದೆ. ‘ನಮ್ಮ ಕುಲ-ನಿಮ್ಮ ಕುಲ’ ಎನ್ನುವ ಪದಪುಂಜಗಳು ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಮುನ್ನಡೆಸುತ್ತಿರುವ ಬಗೆಯನ್ನು ನೆನೆಸಿಕೊಂಡರೆ ಖೇದವೆನಿಸುತ್ತದೆ. ಯಾವತ್ತೂ ಇದರಿಂದ ನಮಗೆ ಮುಕ್ತಿ ಸಿಗಲ್ವೇನೋ ಎಂದು ಅನಿಸದೆ ಇರದು! ಇಲ್ಲಿ ಗಜಲ್ ಗೋ ರಮೇಶ್ ಗಬ್ಬೂರ್ ಅವರು ಬಡತನದ, ಅಸ್ಪೃಶ್ಯತೆಯ ಕರಾಳತೆಯನ್ನು ನಗ್ನಗೊಳಿಸಿದ್ದಾರೆ. ಜೊತೆಯಲ್ಲಿಯೇ ಮಾನವೀಯತೆ ಮಸಣ ಸೇರಿದ ಬಗೆಯನ್ನು ಅರುಹಿದ್ದಾರೆ.

ನಿಮ್ಮ ಮನೆಯ ಹಳಸಿದ ಅನ್ನಕ್ಕೆ ಬೊಗಸೆ ಒಡ್ಡಬಹುದು ನಮ್ಮ ಕುಲ

ನಿಮ್ಮೂರಿನ ಕೆರೆಬಾವಿ ಹಳ್ಳಕ್ಕೆ ಕೈಚಾಚಿದರೆ ರುಂಡ ಕೇಳಬಹುದು ನಿಮ್ಮ ಕುಲ

     ಡಾ. ಬಿ. ಆರ್. ಅಂಬೇಡ್ಕರ್ ಎನ್ನುವುದು ಕೇವಲ ಒಂದು ಹೆಸರಲ್ಲ, ದಮನಿತರ ಬಾಳಿನ ಆಶಾಕಿರಣ. ಅನಾದಿಕಾಲದಿಂದಲೂ ಅನಾಯಾಸವಾಗಿ ಸಮಾಜವನ್ನು ರಿಂಗ್ ಮಾಸ್ಟರ್ ನಂತೆ ಆಟವಾಡಿಸುತಿದ್ದ ಜಾತಿಯತೆಯನ್ನು ತಡೆಯಲು, ಶೋಷಿತರ ಪರವಾಗಿ ಧ್ವನಿ ಎತ್ತಲು ಮಾಡಿದ ಪ್ರಯತ್ನಗಳು ಇಂದು ನಮ್ಮ ಕಣ್ಣ ಮುಂದಿವೆ. ಇಲ್ಲಿ ಗಬ್ಬೂರ್ ಅವರು ಕೆಳವರ್ಗದವರಿಗೆ ಶಾಲೆ ಎಂಬುದು ಹೇಗೆ ಮರಿಚೀಕೆಯಾಗಿತ್ತು ಎಂಬುದನ್ನು ತುಂಬಾ ಸರಳವಾಗಿ ಓದುಗರ ಎದೆಗೆ ಇಳಿಸಿದ್ದಾರೆ. ಶಿಕ್ಷಣದಿಂದ ವಂಚಿತರಾದ ಜನ ಕಂದಾಚಾರದ ಸುಳಿಯಲ್ಲಿ ಸಿಲುಕಿ ತಮ್ಮ ಬದುಕನ್ನು ಹಾಳುಮಾಡಿಕೊಂಡಿರುವುದು ಇವಾಗ ಇತಿಹಾಸ. ಇದೆಲ್ಲವನ್ನು ಹೋಗಲಾಡಿಸಿದ ಅಂಬೇಡ್ಕರ್ ಅವರಿಗೂ ಒಂದು ಬದುಕಿದೆ, ಕನಸಿದೆ ಎಂಬುದನ್ನು ಸಾಬೀತು ಪಡಿಸಿ, ಬದುಕಲು ದಾರಿ ಮಾಡಿಕೊಟ್ಟಿರುವುದನ್ನು ಸುಖನವರ್ ರಮೇಶ್ ಗಬ್ಬೂರ್ ಅವರು ಸ್ಮರಿಸಿದ್ದಾರೆ.

ಹರಿದ ಅಂಗಿಯ ತೊಟ್ಟು ಊರ ಮನೆಯ ಹೊಸ್ತಿಲೊಳು ನಾನು ತಟ್ಟೆ ಹಿಡಿದು ಬೇಡುತಿದ್ದೆ

ಹಸಿದ ನನ್ನ ಹೊಟ್ಟೆಗೆ ಶತಮಾನಗಳ ಹಸಿವು ತೀರಿಸಲು ಅವನು ನನಗೆ ರೊಟ್ಟಿಯಾಗಿ ಬಂದ

     ಗಜಲ್ ಹೃದಯದ ಹರಿವಾಗಿದ್ದು, ನಮ್ಮ ಅಂತಃಪ್ರಜ್ಞೆಯ ದಿಕ್ಸೂಚಿಯಾಗಿದೆ. ಇದು ಪ್ರಕೃತಿ ತಾಯಿಯ ಧ್ವನಿಯಾಗಿದೆ. ಇದೊಂದು ನಿಜವಾದ ಅತೀಂದ್ರಿಯ. ಸಮಾಜ ಸೃಷ್ಟಿಸಿದ ಸಂಕೀರ್ಣತೆಯನ್ನು ಗಜಲ್ ಪರಿಹರಿಸುತ್ತದೆ. ಈ ದಿಸೆಯಲ್ಲಿ ಗಜಲ್ ಗೋ ಶ್ರೀ ರಮೇಶ್ ಗಬ್ಬೂರ್ ಅವರಿಂದ ಗಜಲ್ ಲೋಕವು ಮತ್ತಷ್ಟು ಮೊಗೆದಷ್ಟೂ ಶ್ರೀಮಂತವಾಗಲಿ ಎಂದು ತುಂಬು ಹೃದಯದಿಂದ ಶುಭ ಕೋರುತ್ತೇನೆ.

ನಾನು ಕೇವಲ ಬೆಳಕಿನ ಕಿರಣವನ್ನು ಕೇಳಿದೆ

ನಿಮಗೆ ಬೆಂಕಿ ಹಚ್ಚಲು ಯಾರು ಹೇಳಿದರು”

ಜಾಕೀಯಾ ಗಜಲ್

ಮನುಷ್ಯನ ಮನಸು ತಳಮಳಗಳ ಗೋದಾಮು. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ ಜನ್ನತ್ ನಲ್ಲಿ ವಿಹರಿಸುತ್ತಿರಬೇಕಾದರೆ ಹಲವು ಬಾರಿ ಕಾಲವನ್ನೂ ಶಪಿಸಿದ್ದೇನೆ. ಆದರೂ ಕಾಲದ ಮುಂದೆ ಮಂಡಿಯೂರಲೆ ಬೇಕಲ್ಲವೇ.. ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮತ್ತೆ ಮುಂದಿನ ಗುರುವಾರ‌ ತಮ್ಮ ಮುಂದೆ ಬರುವೆ..ಹೋಗಿ ಬರುವೆ….


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top