ಜಯಂತಿ ಸುನಿಲ್ ಕವಿತೆ-ದೀಪವಾರದ ಇರುಳು

ಕಾವ್ಯ ಸಂಗಾತಿ

ದೀಪವಾರದ ಇರುಳು

ಜಯಂತಿ ಸುನಿಲ್

ಆಕಾಶವನ್ನು, ನೆಲವನ್ನು, ಮೌನವನ್ನು,ಏಕಾಂಗಿತನವನ್ನು ಜೊತೆ ಜೊತೆಗೆ ನನ್ನನ್ನು ತದೇಕಚಿತ್ತದಿ ದಿಟ್ಟಿಸುತ್ತಿರುವ ಇವನ್ಯಾರು?
ಸಾಕಷ್ಟು ಬರಿದಾಗಿಸಿಕೊಂಡ ಕನಸುಗಳ ಕಂಗಳಲಿ ಹೊತ್ತು, ಲೌಕಿಕದ ಭಾರವನ್ನು ದಾಡಿಗೆ ಅಂಟಿಸಿಕೊಂಡ ಬೈರಾಗಿ ಇವನ್ಯಾರು?
ಕೇಳಿಯೇ ಬೇಕೆನ್ನಿಸಿ ಕೇಳಿಯೇಬಿಟ್ಟೆ…

ನಿನ್ನದ್ಯಾವ ಸೀಮೆಯೋ ಜೋಗಿ, ನಿನ್ನ ಅರಮನೆಯೆಲ್ಲಿ?
ಯಾಕಾಗಿ ಇಲ್ಲೇ ನಿಂತಿರುವೆ?
ಯಾರಿಗಾಗಿ ನೀನು ಕಾದಿರುವೆ?
ನಡೆ ನಡೆ ಮುಂದೆ ನಡೆ
ನನ್ನ ದೊರೆ ಬರುವ ಹೊತ್ತಾಯಿತು
ತೊಟ್ಟಿಲಲಿ ಮಲಗಿರುವ ಕಂದ ಅಳುವ ಸದ್ದಾಯಿತು
ಹೊರಡಬೇಕು ನಾನು..
ಮುಂದೆ ಸಾಗು ನೀನು…

ಮನೆ ಮುಂದೆ ನಿಂತ ಅವನೊಡನೆ ಮಾತನಾಡುತ್ತೇನೆ
ಆಡಲಾಗದ್ದನ್ನು ಕಣ್ಣಿಗೆ ಬಿಟ್ಟು
ಕಂಗಳಲಿ ಕಿಡಿಯನ್ನು ಹೊತ್ತಿಸುತ್ತೇನೆ
ಕಂಡದ್ದನ್ನೆಲ್ಲಾ ಕಟ್ಟಿಕೊಡುವ ನಾಲಿಗೆಗಳಿಗೆ ಆಹಾರವಾಗಿಸಬೇಡ ತೊಲಗಾಚೆ ಎಂದಬ್ಬರಿಸುತ್ತೇನೆ…

ಧಿಮಾಕಿನವಳು ಎಂದುಕೊಂಡಿರಬೇಕು ಫಕೀರ
ಚಾಲೂ ಫಕೀರ
ಕಣ್ಣಲ್ಲೇ ಮೋಹ ಸುರಿಸುತ್ತಾನೆ
ಮಾತಿಗೆ ಮಲ್ಲೆ ಮುಡಿಸುತ್ತಾನೆ
ಇವನೊಡಗಿನ ಸಂಜ್ಞೆಗಳು ಅಸಂಬಧ್ಧವೆನಿಸಿ ಒಳಹೋಗುತ್ತೇನೆ…

ರಾತ್ರಿ ಹಾಸಿಗೆ ಖಾಲಿಯೆನಿಸುವುದಿಲ್ಲಾ ಪಕ್ಕದಲ್ಲಿ ಪತಿಯಿದ್ದಾನೆ…
ಹಗಲಲಿ ಒಂಟಿಯೆನಿಸುವುದಿಲ್ಲಾ
ಕಂಕುಳಲಿ ಕಂದನಿದ್ದಾನೆ
ಮತ್ಯಾಕೆ ಬೋರೆನಿಸಬೇಕು ಜೀವನ? ಜೋಗಿಯ ಹಿಂದೆ ಹೊರಡಲು…
ಆದರೂ ಮನಸ್ಸೇಕೋ ತಡೆಯಲೊಲ್ಲದು ಮನೆಮುಂದೆ ನಿಂತ ಫಕೀರನ ಮೋಹಕನಗು ರಾಚುತ್ತದೆ ಮೌನಕ್ಕೆ…
ಇಷ್ಟಕ್ಕೂ ಹೀಗೆ ಕಾಡುವ ಇವನ್ಯಾರು? ಯೋಚಿಸುತ್ತೇನೆ

ಸಮಯ ಜರುಗದಾಗ ಟ್ರಂಕಿನಿಂದ ಡೈರಿಯಿಂದ ಹೊರತೆಗೆಯುತ್ತೇನೆ
ಮಡಚಿದ ಕಾಗದವೊಂದರಲ್ಲಿ ಅವನಿದ್ದ.ಅವನೀಗ ಫಕೀರನಾಗಿದ್ದ ಆ ಫಕೀರನೇ ಕಣ್ಣ ಮುಂದೆ ನಿಂತಿದ್ದ
ಕಣ್ಣಿಂದ ನೋಡಲಾಗದ,ಕನಸಿನಲ್ಲೂ ಊಹಿಸಲಾಗದ ಅವನೇ ಇವನು!
ಆದರೇನು ನಾನೀಗ ಅವಳಲ್ಲಾ.. ಅವಳೀಗ ನಾನಾಗಿಲ್ಲಾ…

ಗಂಡನ ಒಡೆತನದಲ್ಲಿದ್ದೇನೆ
ಮಂಚದ ಮೇಲೆ ಒರಗಿದಾಗ ಒಂಟಿತನ ಕಾಡುವುದಿಲ್ಲಾ
ಮೈ,ಮನ ಎಲ್ಲದಕ್ಕೂ ಒಡೆಯನಿದ್ದಾನೆ
ಇನ್ನಿಲ್ಲದ ಒಲವಿನ ಉಡುಗೊರೆ ಯಾಗಿ ಕಂದನಿದ್ದಾನೆ
ಮತ್ಯಾಕೆ ಬೇಸರವಾದೀತು ಜೀವನ?
ಜೋಗಿ ಹಿಂದೆ ಹೊರಡಲು..

ನಿಗಿನಿಗಿ ಬಿಸಿಲಲ್ಲಿ ನಿಂದವ ಕೈಚಾಚಿ ಬರಸೆಳೆಯಲು ಕೈಹಿಡಿದ…
ಕೈ ತಣ್ಣಗಿತ್ತು,ಒಲವಿನಷ್ಟೇ ಹಿತವೆನಿಸುವಷ್ಟು
ಆದರೇನು?
ಥಟ್ಟನೆ ಬಿಡಿಸಿಕೊಂಡೆ
ಹೂ ಪಕಳೆ ಬಿಚ್ಚುವಂತೆ ನುಡಿದ..
ನೀ ಜೊತೆಗಿದ್ದ ಹಗಲು,ಇರುಳುಗಳು ಎಷ್ಟು ಚೆಂದ! ನಿನ್ನ ಒಂದು ಮಾತು,ನಗು,ಹೆಗಲು,ಸಾಂತ್ವನ,ಈ ಜನ್ಮ ಎಲ್ಲವೂ ನನ್ನದೇ…ಈಗ ಮತ್ತೆ ನನ್ನದಾಗಬೇಕೆಂದ
ನಾ ಒಲ್ಲೆ ಎಂದೆ..

ನಮ್ಮದು ಈಗಷ್ಟೇ ತುಂಬಿದ ಮೋಹವಲ್ಲಾ…
ಪ್ರೀತಿ ಹೆಪ್ಪುಗಟ್ಟಿ ಬಹುದಿನಗಳಾಯ್ತಲ್ಲಾ ಎಂದ…
ನಾನು ಅವನೆದುರು ಮಂಡಿಯೂರಿ ಕುಳಿತೆ
ಕೊರಳಲ್ಲಿ ಮಾಂಗಲ್ಯ ಹೊಳೆದಿರಬಹುದು
ತೊಟ್ಟಿಲಲ್ಲಿ ಕಂದನ ಅಳುವ ಸದ್ದು ಕೇಳಿಸಿರಬಹುದು…

ಬಾಗಿಲ ಹೊರಗೆ ನಿಂತವನು ಬೆನ್ನು ಮಾಡಿ
ಎಲ್ಲೆ ಮೀರಿದ ಎಲ್ಲ ಪರಿತಾಪಗಳನ್ನು ಕಡಲಿಗೆ ಸುರಿಯಲು ಕತ್ತಲಲಿ ಹೆಜ್ಜೆ ಹಾಕಿದ..
ದೀಪವಾರದ ಇರುಳಿಗೆ ಎಲ್ಲಿಲ್ಲದ ದಣಿವು..
ಒಡಲಲ್ಲಿ ಮಂಗಳಸೂತ್ರ
ಮಡಿಲಲ್ಲಿ ಮುದ್ದು ಕಂದ
ಕತ್ತಲು ಸರಿದ ಮೇಲೆ ಬಾಗಿಲಲಿ ಕೆಂಗುಲಾಬಿಯೊಂದು ನಗುತ್ತಿತ್ತು..


4 thoughts on “ಜಯಂತಿ ಸುನಿಲ್ ಕವಿತೆ-ದೀಪವಾರದ ಇರುಳು

  1. ಆಹಾ…… !!!! ಪ್ರೇಮಸುಧೆ ಜಿನುಗುವ ಕಾವ್ಯಭಾವ… ಲಹರಿ………

  2. ಜೋಗಿಯ ಜಾಗದಲ್ಲಿ ಯಾಗಿರಲು ಸಾಧ್ಯ!?
    ಎಲ್ಲಾ ಕಳಕೊಂಡವನಲ್ಲವಾ!?
    ನಿಂತ ನೆಲವೂ ಆತನದಲ್ಲ ಎಂದಮೇಲೆ
    ನೆಲದ ಹಂಗೇಕೆ ಜೋಗಿಗೆ!?

    ದಾಹ ತೀರಿಸದ ನಾರಿಯ ಧರ್ಮ
    ಧರ್ಮ ವೇನು ಬಿಂಕದ ಬಾಳಿಗೆ
    ಪಾಳುಗುಡಿಯ ಜೋಗಿ ನಾನು
    ನಾಳೆ ಗಾದರೂ ಸಿಗದೆ ಗುರುತು!?

    ನಿನ್ನ ಕಟ್ಟುಪಾಡು ನಿನಗಿರಲಿ ನಾರಿ
    ನನ್ನ ಕಟ್ಟಳೆಗಳನ್ನೂ ಕೈಕೊಳ್ಳದೆ ಒಳ ಸರಿದು
    ಕಂಕುಳ ಕಂದ, ಕಟ್ಟಿದ ಮಂಗಲ ಸೂತ್ರ
    ಭಾವ ಸೆಳೆತವ ಮರೆಸಿತೇ ಗೆಳತಿ!?

    ಬೇಡಿದ್ದನ್ನು ನೀಡದೆ, ಬರಾಡಗಿಸಿ ಬದುಕ
    ಕೊಂದುಹಾಕಿ ನಡೆದೆಯಲ್ಲ ಮಾಯಾಂಗಿ
    ಬಾಳದಾಹ ತೀರಿದ ಬಳಿಕ ಇರಲಾರನಲ್ಲ
    ಎಲ್ಲರಂತಲ್ಲ ಈ ಜೋಗಿ ನೀ ಬಿಟ್ಟ ತ್ಯಾಗಿ

    ಅಂತರದ ಘಟ್ಟ, ಬೆಂತರದ ಘಟ್ಟ ಅಲ್ಲಿಗೆ
    ಅರವತ್ತು ಘಟ್ಟ ವಿದ್ದರೂ ಹಿಂಬಾಲಿಸು
    ಮರುಳು ಮಾಧವನ ಮೈಸಿರಿಯಲ್ಲಿ
    ಮುರುಳಿಯ ಮೋಹಕ ನಾದದಲ್ಲಿ…

    ಎಲ್ಲ ಮರೆತ ರಾಧೆಯೇ ನೀನಾಗಿರು
    ಜಗವಮೋಹಿಪ ಪ್ರೇಮ ಕಾಶ್ಮೀರವಾಗಿರು
    ಯಾಕಂದರೆ ಪ್ರೇಮವೇ ಜೀವ-ದೈವ
    ಪ್ರೇಮವೇ ಜಯಂತಿಯ ಸುನೀಲಶ್ಯಾಮ.

    …………. ರಾ. ಸು. ತಿಮ್ಮಯ್ಯ

Leave a Reply

Back To Top