ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಹೆಣ್ಣು ಕುಟುಂಬದ ಕಣ್ಣು

ನನ್ನ ತರಗತಿಯಲ್ಲಿ  ಓದಿನಲ್ಲಿ ಚುರುಕಾಗಿದ್ದ ಮೀನಾ ಎರಡು ವಾರ ಕಳೆದರೂ ಶಾಲೆಗೆ ಬರಲಿಲ್ಲ. ಅವಳ ಕುರಿತು ಪ್ರತಿದಿನ ಮಕ್ಕಳಲ್ಲಿ ವಿಚಾರಿಸಿದಾಗ ತಮಗೆ ಗೊತ್ತಿಲ್ಲ ಎಂದು ಉತ್ತರಿಸಿದರು.ಅಂದು ಎಂದಿನಂತೆ ಪ್ರಾರ್ಥನೆ ಮುಗಿಸಿ ಮುಖ್ಯಾಧ್ಯಾಪಕರ,ಅನುಮತಿ ಮೇರೆಗೆ ತರಗತಿಯ ವೀಣಾಳೊಂದಿಗೆ ಮೀನಾಳ ಮನೆಗೆ ಹೊರಟು ಬಂದೆ. ಬಾಗಿಲು ಮುಚ್ಚಿತ್ತು ಆದರೆ ಬೀಗ ಹಾಕಿರಲಿಲ್ಲ,ಬಾಗಿಲನ್ನು ಬಡಿಯುತ್ತಾ”ಒಳಗೆ ಯಾರಿದ್ದೀರಿ?ನಾನು ಮೀನಾಳ ಟೀಚರ್ ಬಂದಿದ್ದೇನೆ,ಬಾಗಿಲು ತೆರೆಯಿರಿ”ಎಂದಾಗ ಬಾಗಿಲು ತೆರೆಯಲಿಲ್ಲ ಯಾರ ಧ್ವನಿಯೂ ಒಳಗಿನಿಂದ ಬರಲಿಲ್ಲ.ಮೀನಾಳ ಮನೆ ಶಾಲೆಯಿಂದ ಊರೊಳಗೆ 1ಕಿ.ಮಿ ದೂರ ಇದ್ದುದರಿಂದ ಆ ಮನೆಯನ್ನು ನೋಡಿದ್ದ ವೀಣಾಳನ್ನು ಕರೆದುಕೊಂಡು ಹೋಗಿದ್ದೆ.ವೀಣಾ ಕೂಡ ” ಟೀಚರ್ ಬಂದಿದ್ದಾರೆ, ಬಾಗಿಲು ತೆಗೆ ಮೀನಾ…”ಎಂದು ಕೂಗಿದಾಗ ಮೀನಾಳ ತಾಯಿ ಬಾಗಿಲು ತೆರೆದು “ಒಳಾಕ ಬರ್ರೀ..ಬಾಯಾರ ಕುತ್ಕಳ್ಳಿ”ಎಂದು ಕುರ್ಚಿಯನ್ನು ಸರಿಸಿದಾಗ ನಾನು ಪ್ರಶ್ನೆ ಕೇಳುವ ಮುನ್ನ ಅವಳೇ ಮಾತಿಗಾರಂಭಿಸಿದಳು.”ನಮ್ಮ ಮೀನಾ ದೊಡ್ಡಕಿ ಆಗ್ಯಾಳ..ಇನ್ಮುಂದ ಆಕಿ ಶಾಲಿಗಿ ಬರಾಕಿಲ್ಲ..ಯಾಕಂದ್ರ ಹೆಣ್ಮಕ್ಕಳು ದೊಡ್ಡೋರಾದ ಮೇಲೆ ನಮ್ಮ ಮನೆತನದಾಗ ಯಾರೂ ಶಾಲಿ ಕಲ್ತಿಲ್ಲಂತ..”ಎಂದು ಮಾತು ಮುಗಿಸುವಷ್ಟರಲ್ಲಿ” ನಿಮ್ಮ ಮನೆತನದ ಮಾತು ಬಿಡ್ರಿ,ನೀವು ಶಾಲೆ ಕಲಿತಿಲ್ಲ ಕೂಲಿ ಮಾಡಿ ಜೀವನ ಮಾಡ್ತಾ ಇದ್ದೀರಿ ನಿಮ್ಮ ಮಗಳು ಕಲಿಯುವುದರಲ್ಲಿ ತುಂಬಾ ಜಾಣೆ,ಅವಳನ್ನು ಶಾಲೆಗೆ ಕಳಿಸಿ ಚನ್ನಾಗಿ ಕಲಿತು ತನ್ನ ಕಾಲ ಮೇಲೆ ತಾನು ನಿಂತು ನಿಮ್ಮನ್ನು ಸುಖವಾಗಿ ನೋಡಿಕೊಳ್ತಾಳೆ”ಎಂದಾಗ “ಶಾಲಿ ಕಲ್ಸಾಕೂ ರೊಕ್ಕಾ ಬೇಕು ಮದುವಿಗೂ ರೊಕ್ಕಾ ಬೇಕು ಹೆಂಗರಿ ಬಾಯಾರ? ನಾವಂತೂ ಕೂಲಿನಾಲಿ ಮಾಡ್ಕೊಂಡು  ಹೊಟ್ಟಿತುಂಬಕೊಳ್ಳೋರು, ನೀವು ಹೇಳಿದಂಗ ಅಕಿ ಕಲ್ಯಾಕ ಶಾಣಾಕಿ ಅದಾಳ ನಿಮ್ಮಾತ

 ನಂಬತೇನಿ ನಮ್ಮಿಂದ ಕಲ್ಸಾಕ ಆಗಾಕಿಲ್ಲ ಬಿಡ್ರಿ” ಎಂದಾಗ  ಸರ್ಕಾರದಿಂದ ಬಾಲಕಿಯರ ವಿದ್ಯಾಭ್ಯಾಸಕ್ಕಿರುವ ಸೌಲಭ್ಯಗಳನ್ನು ಕುರಿತು ಹೇಳಿದಾಗ ಮೀನಾ ಸಂತಸದಿಂದ”ನಾ ಶಾಲಿಗಿ ಹೋಗ್ತೇನಿ, ಟೀಚರ್ ಹೇಳಿದಂಗ ಕೇಳ್ತಿನಿ ಶಾಲಿ ಸೂಟಿ ಇದ್ದಾಗ ನಿಮ್ಮ ಜೊತೆ ಕೆಲ್ಸಕ್ಕ ನೆರವು ಆಗ್ತೆನಿಬೇ..ಚನ್ನಾಗಿ ಕಲ್ತು ನಿನ್ನು ಅಪ್ಪನ್ನು ಜೋಪಾನ ಮಾಡ್ತೀನಿ”

 ಎನ್ನುವಾಗ ಅವಳ ತಾಯಿ ಅವಳನ್ನು ತಬ್ಬಿ ಮುತ್ತಿಡುವಾಗ

 ಆನಂದ ಭಾಷ್ಪ ಜಿನುಗಿತು.ಮೀನಾಳ   ಮುಖದ ತೇಜಸ್ಸು ಆತ್ಮಸ್ಥೈರ್ಯ ಕಂಡು ಅಬ್ಬಾ!ಬಂದದ್ದು ಸಾರ್ಥಕವಾಯಿತೆಂದೆನಿಸಿತು. ಖುಷಿಯಿಂದ ಅವರ ಹಿತ್ತಲಿನ ಪಪ್ಪಾಯಿಯನ್ನು ಕತ್ತರಿಸಿಕೊಟ್ಟಳು.ಬಡವರಾದರೂ ಅವರ ಹೃದಯ ಶ್ರೀಮಂತಿಕೆ ಮನವ ಕಲಕಿತು.ನಾಳೆಯಿಂದ ಶಾಲೆಗೆ ಕಳಿಸಲು ಮೀನಾಳ ತಾಯಿ ಒಪ್ಪಿದರೂ ಮೀನಾ ಮಾತ್ರ ಆಗಲೇ ಪಾಟಿಚೀಲ ಹಿಡಿದುಕೊಂಡು ನನ್ನೊಂದಿಗೆ ಬಂದಳು.ಹೀಗೆ ಸಂಪ್ರದಾಯಸ್ಥಪಾಲಕರು ತಮ್ಮ ಮಕ್ಕಳು ಋತುಮತಿಯರಾದ ಮೇಲೆ ಅದರಲ್ಲೂ ವಿಶೇಷವಾಗಿ ಗ್ರಾಮಿಣ ವಿಭಾಗದಲ್ಲಿ ಶಿಕ್ಷಣ ನೀಡಲು ಹಿಂದೇಟು ಹಾಕುತ್ತಾರೆ.ಇನ್ನೂ ಕೆಲವು ಕಡೆ ಗಂಡು ಹೆಣ್ಣು ಎಂಬ ತಾರತಮ್ಯದಿಂದ ಹೊರತಾಗಿಲ್ಲ. ಭ್ರೂಣದಿಂದ ಲಿಂಗ ಪರೀಕ್ಷೆಯ ಸಾಹಸ ಹೆಣ್ಣಾದರೆ ಹತ್ಯೆ ಮಾಡುವ ಮನೋಧಾರಣೆ ನಿರೀಕ್ಷಿತ ಮಟ್ಟದಲ್ಲಿ ಬದಲಾಗಿಲ್ಲ.ವಿಜ್ಞಾನ ತಂತ್ರಜ್ಞಾನ,ಉಡಿಗೆ,ತೊಡಿಗೆ,ಊಟ,ಉಪಹಾರ,ಸೇರಿಸಿದಂತೆ ಎಲ್ಲದರಲ್ಲೂ ಬದಲಾವಣೆ ಕಾಣುತ್ತಿದ್ದೇವೆ.ಪ್ರತಿಯೊಂದರಲ್ಲೂ ಆಧುನಿಕತೆ ನಮ್ಮನ್ನು ಆವರಿಸಿಕೊಂಡಿದೆ.ಆದರೂ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ ಮಾತ್ರಬದಲಾಗುತ್ತಿಲ್ಲ.

“ಹುಡುಗಿಯರು ಶಿಕ್ಷಣ ಪಡೆದಾಗ,ಅವರ ದೇಶಗಳು ಬಲವಾದ ಮತ್ತು ಸಮೃದ್ಧವಾದ ದೇಶಗಳಾಗುತ್ತವೆ”ಎಂದು ಮಿಜೆಲ್ಒಬಾಮ ಹೇಳಿದ್ದಾರೆ.ಒಂದು ಅಂದಾಜಿನ ಪ್ರಕಾರ ಪ್ರಪಂಚವು 18ವರ್ಷಕ್ಕಿಂತ ಕಡಿಮೆ ವಯಸ್ಸಿನ 1.1 ಬಿಲಿಯನ್ ಗಿಂತಲೂ ಹೆಚ್ಚು ಬಾಲಕಿಯರನ್ನೊಳಗೊಂಡಿದೆ.ಇದರಲ್ಲಿ ವಿಶ್ವದಾದ್ಯಂತ ಹೆಗ್ಗಳಿಕೆ ಗಳಿಸುವ ಮಹಿಳಾ ನಾಯಕಿಯರು ,ಉದ್ಯಮಿಗಳು,ಸಾಮಾಜಿಕ ಬದಲಾವಣೆಗಾರರು ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸನ್ನದ್ಧರಾಗುತ್ತಿರುವ ಬಾಲಕಿಯರ ಗುಂಪೇ ಇದೆ.

ಪುರುಷನಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದರೂ ಸಹ ಮಹಿಳೆಯರನ್ನು ತಾತ್ಸಾರವಾಗಿ ನೋಡಲಾಗುತ್ತಿದೆ.ಹೆಣ್ಣು ಹುಟ್ಟಿದೊಡನೆ” ಅಯ್ಯೋ!ಹೆಣ್ಣಾ”ಎಂಬ ಉದ್ಗಾರದಲ್ಲೆ ಹೆಣ್ಣಿನ ಸ್ಥಾನ ನಿರ್ಧರಿತವಾಗುತ್ತದೆ.ಗಂಡಿನಷ್ಟೇ ಹೆಣ್ಣಿಗೂ ಮಹತ್ವ ನೀಡಿದಾಗ ಮಾತ್ರ ತಾರತಮ್ಯವನ್ನು ತೊಲಗಿಸಲು ಸಾಧ್ಯವಾಗುತ್ತದೆ.ಬಾಲ್ಯದಿಂದಲೇ ಅವಳನ್ನುಗಂಡಿನಷ್ಟೇ  ಸಮಾನವಾಗಿ ಕಂಡು ಪ್ರೋತ್ಸಾಹಿಸಬೇಕಾದ ಗುರುತರವಾದ ಜವಾಬ್ದಾರಿ ಪಾಲಕರದ್ದಾಗಿದೆ.ಅವಳ ಚಿಕ್ಕ ಚಿಕ್ಕ ಸಾಧನೆಗಳನ್ನು,ಗೆಲುವುಗಳನ್ನು ಆನಂದಿಸಿದಾಗ ಮತ್ತೆ ಅವಳಲ್ಲಿ ಚೈತನ್ಯದ ಬುಗ್ಗೆ ಇಮ್ಮಡಿಯಾಗುತ್ತದೆ.ಅವಳನ್ನು ಮತ್ತೊಬ್ಬರ ಮನೆ ಬೆಳಗಲು ಹುಟ್ಟಿರುವಳು, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬ ವಿಚಾರದಿಂದ ಕೆಲವೊಮ್ಮೆ ಅವಳನ್ನು ಮದುವೆ ಎಂಬ ಅನಿವಾರ್ಯ ಘಟ್ಟಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ.ಜೀವನದ ಸವಾಲುಗಳನ್ನು ಮೆಟ್ಟಿ ನಿಲ್ಲಲು ಅವಳಿಗೆ ಶಿಕ್ಷಣವೇ ಶ್ರೀರಕ್ಷೆಯಾಗಿದೆ.ಆದ್ದರಿಂದ ಅವಳನ್ನು ಸ್ವಾಭಿಮಾನಿಯನ್ನಾಗಿಸುವದರೊಂದಿಗೆ ಸ್ವಾವಲಂಬಿಯನ್ನಾಗಿಸುವ ಜವಾಬ್ದಾರಿ ಕೂಡ ಪಾಲಕರದಾಗಿದೆ.ಕುಟುಂಬದ ಕಣ್ಣಾಗಿ ಗಂಡ ಮನೆ ಮಕ್ಕಳನ್ನು ನೋಡಿಕೊಳೊಳುವದರೊಂದಿಗೆ ಗಂಡು ಮಕ್ಕಳಂತೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳಿಸದೇ  ಮಕ್ಕಳಂತೆ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುವ ಮಮತಾಮಯಿ ಹೆಣ್ಣು.ಆದ್ದರಿಂದ ಮನೆಮನದ ದೀಪ ಹಚ್ಚುವ ಹೆಣ್ಣಿಗೆ ಹೆಣ್ಣೆ ಸಾಟಿ ಅಲ್ಲವೇ?

ಇತಿಸಾಸ ಕಾಲದಿಂದ ಹೆಣ್ಣಿನ  ಹಿರಿಮೆ,ಇಂದು ಎಲ್ಲ ಕ್ಷೇತ್ರಗಳಲ್ಲೂ ಅವಳ ಸಾಧನೆಯನ್ನೇ ಮಾದರಿಯನ್ನಾಗಿಸಿ ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಅವಳನ್ನು ಸಮಾಜದ ಶಕ್ತಿಯನ್ನಾಗಿಸುವ ನಿಟ್ಟಿನಲ್ಲಿ ಬರುವ ಅಡ್ಡಿ ಆತಂಕಗಳನ್ನು ಮೆಟ್ಟಿ ನಿಲ್ಲುವ ರಕ್ಷಣಾತಂತ್ರಗಳ ತರಬೇತಿ ನೀಡುವ ಮೂಲಕ ತನ್ನ ಗುರಿ ತಲುಪುವ ಗುರುತರ ಮಾರ್ಗದರ್ಶನವನ್ನು ನೀಡಬೇಕು. ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಚಾರಿತ್ರ್ಯವಂತಳಾಗಿ ಬಳಸಿಕೊಳ್ಳುವಲ್ಲಿ ಕುಟುಂಬದ ಸಂಸ್ಕಾರ ತುಂಬಾ ಮುಖ್ಯವಾಗಿದೆ.ಈ ಮೂಲಕ ಸಮಾಜದಲ್ಲಿ ಮಹಿಳೆಯ ಸ್ಥಾನದ ಗರಿಮೆಯನ್ನು ಬಾನೆತ್ತರಕ್ಕೆ ಒಯ್ಯಲು ಸಾಧ್ಯ ಅಲ್ಲವೇ?


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

One thought on “

  1. ತುಂಬಾ ಚೆನ್ನಾಗಿ ಲೇಕನ ಮೂಡಿ ಬಂದಿದೆ ಟೀಚರ್

Leave a Reply

Back To Top