ಲಹರಿ
ಚಿತ್ತದಲ್ಲರಳಿದ ಚಿತ್ತಾರ
ಅರ್ಚನಾ ಯಳಬೇರು
ಇಂಧನವನ್ನು ಕುಡಿ ಕುಡಿದು ಉದರಾಗ್ನಿಯಲ್ಲಿ ವ್ಯಯಿಸಿ ಧೂಮದ ನಿಟ್ಟುಸಿರು ಬಿಡುತ್ತ ನನ್ನನ್ನು ಹೊತ್ತು ಸಾಗುತ್ತಿತ್ತು ಕಾರು. ಗೋಣನ್ನು ಹಾಗೆ ಸೀಟಿಗೆ ಒರಗಿಸಿ ಕುಳಿತು, ಕಂಗಳನ್ನು ಮುಚ್ಚಿ ನಿದ್ರಾದೇವಿಗೆ ಶರಣಾಗಬೇಕು ಎನ್ನುವಷ್ಟರಲ್ಲಿ ಯಾರೋ ಎದುರು ಬಂದಾಯ್ತು. ಛೇ ಹೋಗುತ್ತಿದ್ದ ಕಾರಲ್ಲಿ ಕುಳಿತಿದ್ದ ನನ್ನೆದುರು ಯಾರು ಬರಲು ಸಾಧ್ಯವೆಂದು ಕೊಳ್ಳುವಷ್ಟರಲ್ಲಿ ಮತ್ತೆ ಕಣ್ಣೆದುರು ಬಂದು ನಿಂತಾಯ್ತು. ಯಾರು, ಏನು, ಎತ್ತ ಎಂದು ಯೋಚಿಸುವಷ್ಟರಲ್ಲಿ ಜೀವ ಭಾವಗಳಲ್ಲಿ, ಕನಸು ಮನಸಿನಲ್ಲಿ ಮೆಚ್ಚಿದ ಒಲವು ನೀನೆಂದು ತಿಳಿದು ಒಳಗೊಳಗೇ ಖುಷಿಯು ಉತ್ತುಂಗಕ್ಕೇರಿ ವದನದಲ್ಲಿ ನೆನಪಿನ ಬುತ್ತಿಯೊಂದು ಹಾದು ಹೋಯಿತು. ಹಾಗೆ ಕಟ್ಟಿದ ಬುತ್ತಿ ಗಂಟನ್ನು ಬಿಚ್ಚಿ ಏನೇನಿದೆಯೆಂದು ನೋಡೋಣವೆಂದು ನಿಧಾನವಾಗಿ ಬಿಡಿಸತೊಡಗಿದೆ. ಬಿಡಿಸಿ ನೋಡಿದರೆ… !! ಏನ್ ಹೇಳೋದು ಹೇಳಿ, ಭಾವನೆಗಳ ರಸದೌತಣ ಉಂಡು ತೇಗುವಷ್ಟಿದೆ. ನಿಮಗೆ ಹೆಚ್ಚೇನೂ ರುಚಿಸದಿದ್ದರೂ ಕೂಡ ಉಗುಳದೆ ನುಂಗುವಿರೆಂಬ ಆಶಾವಾದ ನನ್ಮದಲ್ಲೀಗ.
ಹೌದು..!! ಎದುರೆದುರು ಬಂದವರು ಯಾರೆಂದು ಬಲ್ಲಿರಾ..! ಅವನೇ ಚೋರ, ಚಿತ್ತಚೋರ. ಹೃದಯ ಕದ್ದು, ಮನಸು ಗೆದ್ದು ಪ್ರೀತಿ ತೀಜೋರಿಯನ್ನು ಒಲವಿನ ಕೀಲಿಕೈಯಿಂದ ಭದ್ರವಾಗಿಸಿದವನು. ಮತ್ತೆ ಇದನ್ನು ಅಸತ್ಯವೆಂದು ಪೊಳ್ಳು ವಾದಕ್ಕಿಳಿಯದಿರು ಒಲವೇ. ಒಪ್ಪಿ ಅಪ್ಪಿಕೊಳ್ಳಲೇ ಬೇಕಾದ ಸತ್ಯವಿದು. ಕಲೆಗಾರನ ಕುಂಚದಲ್ಲರಳುವ ಚಿತ್ರಕ್ಕಿಂತ ನನ್ನ ಚಿತ್ತದಲ್ಲರಳುವ ನಿನ್ನ ಚಿತ್ರವು ಎಷ್ಟು ಅದ್ಭುತವಾಗಿದೆಯಲ್ಲವೇ..? ಎಷ್ಟು ಮನಮೋಹಕವಾಗಿದೆಯಲ್ಲವೇ..? ಅದನ್ನು ನೆನೆಸಿಕೊಂಡರೆ ಹೃದಯದ ಕಂಪನವು ಕೂಡ ಇಂಪಾದ ಪ್ರೇಮಗೀತೆಯಂತೆ. ಅಯ್ಯೋ.. ನನ್ನ ಚಿತ್ತದಲ್ಲರಳಿದ ಚಿತ್ರ ನಿಮಗೆ ಹೇಗೆ ಕಾಣಬೇಕು ಅಲ್ವೇ… ನನ್ನೆದೆಯು ಕಂಪಿಸುವ ನಾದವು ನಿಮಗೆ ಕೇಳಿಸುವುದೇ..? ಎಂಥ ಮಂಕುದಿಣ್ಣೆ ನಾನು ಅಂತ ಅಂದ್ಕೋಬೇಡಿ. ಒಲವಿನ ಉಸ್ತುವಾರಿಯಲ್ಲಿ ಮೌನವು ಮುದಗೊಂಡು ಮಾತುಗಳಿಂದ ಅಧರವನ್ನು ಚುಂಬಿಸಲಾಗದೆ ಪದಗಳಲ್ಲಿ ಮುತ್ತಿನ ಹೂ ಮಳೆ ಸುರಿಸಿ ಬಿಡೋಣವೆಂದು ಕೊಂಡ ಮನದ ಆಸೆಗೆ ಇಂಬು ಕೊಡುವ ಹುಂಬತನ ಮಾಡಿದ್ದೇನೆ. ಹೋಗ್ಲಿ ಬಿಡಿ.. ನನ್ಮನದ ಭವ್ಯತೆ ನಿಮಗೆ ಹೇಗೆ ಅರ್ಥ ಆಗ್ಬೇಕು?? ಆದರೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡ್ತೀರಿ ಅನ್ನುವ ನಂಬಿಕೆ ನನಗಿದೆ.
ಇನ್ನೇನು ಬಾಲ್ಯವನ್ನು ಬಾಲಿಶದಲ್ಲೇ ಕಳೆದ ನನ್ಮನಕೆ ಕೌಮಾರ್ಯವು ಕರೆದದ್ದು ತಿಳಿಯಲೇ ಇಲ್ಲ. ಬಾಲ್ಯದಲ್ಲಿದ್ದ ಭರವಸೆಯು ಬೆಪ್ಪಾಗಿ ಬದಿಗೆ ಸರಿದದ್ದು ಬುದ್ದಿಗೆ ಹೊಳೆಯಲೇ ಇಲ್ಲ. ಹೀಗಿರುವಾಗಲೇ ಮನದಲ್ಲಿ ಅದೇನೋ ಹೊಸ ಹೊಸ ಭಾವಗಳು, ಕಂಗಳಲ್ಲಿ ಸ್ವಪ್ನಗಳ ರಂಗು ರಂಗಿನ ಚಿತ್ತಾರ. ಜೀವ ಭಾವದಲ್ಲಿ ನವನವೀನತೆ, ಕಂಪಿಸುವ ಹೃದಯದಲಿ ಒಲವಿನ ಝೇಂಕಾರ. ನನಗೇಕೆ ಹೀಗಾಗುತ್ತಿದೆ..? ಇದೇನು ಹೊಸ ಪರಿ..? ಎನ್ನುವ ಪ್ರಶ್ನೆಗೆ ಒಳಗೊಳಗೇ ಒಂದು ಉದ್ಗಾರ ಕೇಳಿದಂತಿದೆ. ನೀನಿನ್ನೂ ಚಿಕ್ಕ ಮಗುವಲ್ಲ, ಹರೆಯದ ಹೊಸ್ತಿಲಲ್ಲಿ ಇದ್ದೀಯಾ, ನಿನ್ನೊಳಗಿನ ಕಂಪನ, ಇಂಪನಗಳೆಲ್ಲವೂ ವಯಸ್ಸಿನ ವರ್ಚಸ್ಸು ಎಂದು ಒಳ ಮನಸ್ಸು ಕೂಗಿ ಹೇಳಿದಂತಾಯ್ತು. ಒಮ್ಮೆಲೆ ಬೆಚ್ಚಿ ಬಿದ್ದಂತಾದ ನನಗೆ ನನ್ನೊಳಗಿನ ಲಜ್ಜೆ ಆನನವ ಆವರಿಸಿ ಮತ್ತೊಮ್ಮೆ ನೀನು ಕೌಮಾರ್ಯದ ಕಾಲಡಿಯಲ್ಲಿ ಬಿದ್ದಿದ್ದೀಯಾ ಎಂದು ಅಸಡ್ಡೆಯಲ್ಲಿ ನಕ್ಕಂತಾಯ್ತು. ನಾನೋ ಹರೆಯಕ್ಕೆ ಹೆದರಿಸುವವಳಂತೆ ಮನಸಿನ ಮಾತನ್ನು ಲೆಕ್ಕಿಸದೆ ನಿರ್ಲಕ್ಷಿಸಿ ನಾನೇ ದೊಡ್ಡ ಜನ ಎಂಬಂತೆ ಬೀಗ ತೊಡಗಿದೆ. ಈಗ ಶುರು ಆಯ್ತು ನೋಡಿ ಅಸಲೀ ಕಥೆ.. !!
ಹೀಗೆ ಸ್ವಪ್ನಗಳು ಸ್ವರ್ಣದಂತೆ ಕಂಗಳಲ್ಲಿ ಹೊಳೆಯುತ್ತಿರುವಾಗಲೇ ನನ್ನನ್ನು ಹೊತ್ತು ಸಾಗುತ್ತಿದ್ದ ಕಾರಿಗೆ ತುಸು ಹೆಚ್ಚೇ ಮತ್ಸರವಾಗಿರಬೇಕು. ಉದರದ ಕಿಚ್ಚನ್ನು ನಂದಿಸಲಾಗದೆ ಒಳಗೊಳಗೇ ಉರಿಯಲೂ ಆಗದೆ ಮುಂದೆ ಸಾಗಲು ಹಿಂದೇಟು ಹಾಕಿದಂತಿತ್ತು. ಅಷ್ಟರಲ್ಲೇ ಮದಗಜನಂತೆ ಮುಂದೆ ಸಾಗುತ್ತಿದ್ದ ಬಹು ಗಾಲಿಗಳುಳ್ಳ ಲಾರಿಯನ್ನು ಹಿಂದಿಕ್ಕುವ ಸಲುವಾಗಿ ತನ್ನ ಕೀರಲು ಧ್ವನಿಯಿಂದ ಅರಚುತ್ತಾ ಒಮ್ಮೆಲೇ ಮುಂದೆ ಸಾಗಬೇಕೆನ್ನುವಷ್ಟರಲ್ಲಿ ಎದುರಿನಿಂದ ಬಂದ ತೈಲಷಟಕ ಯಂತ್ರಕ್ಕೆ ಢಿಕ್ಕಿ ಹೊಡೆದೇ ಬಿಟ್ಟಿತು ಎಂದುಕೊಂಡು ಹಾಕಿದ ಬ್ರೇಕ್ ನ ರಭಸಕ್ಕೆ ದೈವ ಬಲವೋ, ಕಾಣದ ಶಕ್ತಿಯ ಕೈವಾಡವೋ ಎಂಬಂತೆ ಹುಡಿಯಾಗಬೇಕಿದ್ದ ಕಾರಿನ ಬದಲಿಗೆ ನನ್ನ ಚಕ್ಷುಗಳಲ್ಲಿ ನವನವೀನ ಚಿತ್ತಾರ ಬರೆಯುತ್ತಿದ್ದ ಸ್ವಪ್ನಗಳೆಲ್ಲವೂ ನುಚ್ಚು ನೂರಾಗಿ ಹೋಯ್ತು. ಒಮ್ಮೆ ಹೋದ ಜೀವ ಬಾಯಿಗೆ ಬಂತಾದರೂ ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಒಲವಿನ ಚೆಲುವೆಲ್ಲಾ ಮಾಯವಾಗಿ ವಾಸ್ತವದ ಹಂಗು ದಂಗುಬಡಿಸಿ ಬಿಟ್ಟಿತು.