ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಜನವರಿಯ ಮಹತ್ವ
ಜನವರಿ ಬಂದ ಕೂಡಲೇ ಆಂಗ್ಲರ ಒಂದು ಕಾಮಿಡಿ ನೆನಪಾಗುತ್ತದೆ. ಎಲ್ಲರಿಗೂ ಹೊಸ ವರ್ಷದ ದಿನ ಖುಷಿ ಆದರೂ ಮುಂದೆ ಹೊಸ ವರ್ಷದ ಯೋಜನೆಗಳನ್ನು ಮಾಡುವಾಗ ಬೇಸರ ಆಗುವ ಕಾರಣ ‘ವರಿ ‘ ಪ್ರಾರಂಭ. ಅದು ಮುಂದಿನ ತಿಂಗಳಿನ ವರೆಗೂ ಸಾಗಿ ‘ ಫೆಬ್ರ “ವರಿ”. ಮತ್ತೆ ಸರಿಯಾಗಿ ಮುಂದೆ ನಡೆಯಲು ಪ್ರಾರಂಭ ಮಾರ್ಚ್ ತಿಂಗಳಿನಲ್ಲಿ. ಬ್ರಿಟಿಷರು ಭಾರತವನ್ನು ಆಳಿ ಹೋದ ಬಳಿಕ ಎಪ್ಪತ್ತೈದು ವರ್ಷಗಳಾದರೂ ನಾವು ಅವರ ಕ್ರಮವನ್ನು ಅನುಸರಿಸುವುದು ಬಿಟ್ಟಿಲ್ಲ. ಸೈನ್ಯ ವ್ಯವಸ್ಥೆ, ಕೋರ್ಟು ಕಚೇರಿಗಳು, ಶಾಲೆಗಳು ಎಲ್ಲವೂ ಆಂಗ್ಲರಂತೆ. ಅಂತೆಯೇ ಕ್ಯಾಲೆಂಡರ್, ರಜೆ ಕೂಡಾ. ಹಾಗಾಗಿ ಈಗ 2023 ಹೊಸ ಕ್ಯಾಲೆಂಡರ್ ಆಂಗ್ಲ ವರ್ಷ ಪ್ರಾರಂಭ ಆಗಿದೆ. ಜನವರಿ ಬಂದರೆ ನಾವು ಭಾರತೀಯರಿಗೆ ಎರಡು ಖುಷಿ. ಹೊಸ ವರ್ಷದ ಸಂಭ್ರಮದ ಜೊತೆಗೆ ಸಂಕ್ರಾಂತಿ ಹಬ್ಬ ಮತ್ತು ಒಂದು ರಾಷ್ಟ್ರೀಯ ಹಬ್ಬದ ಆಚರಣೆ. ಅದೇ ನಮ್ಮ ಭಾರತೀಯ ಸಂವಿಧಾನ ಜಾರಿಗೆ ಬಂದ ದಿನ ಗಣರಾಜ್ಯೋತ್ಸವ.
ಭೂಮಿ ತಿರುಗುವಾಗ ಒಂದು ಸಂಕ್ರಾಂತಿಯನ್ನು ಪಡೆಯುವ ಸುಸಂದರ್ಭ ಸಂಕ್ರಾಂತಿ ಹಬ್ಬಕ್ಕೆ ನಾವು “ಸಂ ಕ್ರಾಂತಿಯನ್ನು” ಕಾಣ ಬಯಸಿದರೆ ಪ್ರಕೃತಿಯ ಚಳಿಗಾಲದ ಎಳೆಯ ಚಿಗುರಿನ ರಮ್ಯ ನೋಟ ಸವಿಯುತ್ತಾ ಎಳ್ಳು ಬೆಲ್ಲ ಬೀರುವ ಆನಂದದ ಹಬ್ಬ. ಅದರ ಹಿಂದೆಯೇ ಬರಲಿದೆ ಇಡೀ ದೇಶಕ್ಕೆ ಗಣರಾಜ್ಯೋತ್ಸವದ ಸಂತಸ. ದೆಹಲಿಯಲ್ಲಿ ಆಚರಿಸುವ ಆ ಹಬ್ಬಕ್ಕೆ ಇಡೀ ದೇಶವೇ ಒಂದಾಗಿ ಭಾರತೀಯತೆ ಮೈ ಮರೆಯುವ ಕ್ಷಣ. ಈ ಗಣರಾಜ್ಯೋತ್ಸವಕ್ಕೆ 74 ವರ್ಷಗಳ ಸಂಭ್ರಮ. ಭಾರತ ಅದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುದತ್ತ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವ ಆಚರಿಸಿಕೊಂಡ ಬಳಿಕವಾದರೂ ಸ್ವಲ್ಪ ಮುಂದುವರೆದು ಸಣ್ಣ ಪುಟ್ಟ ದೇಶಗಳಿಗಿಂತ ಮೇಲೇರಿ ಒಲಿಂಪಿಕ್ಸ್ ಆಟಗಳ ಪದಕ ಪಟ್ಟಿಯಲ್ಲಿ ಕೆಳಗಾದರೂ ಕಾಣುವಂತೆ ಆಗಿ, ಮೇಲೇರುತ್ತಾ ತನ್ನ ಸಾಧನೆ ತೋರುತ್ತಿರುವ ದೇಶದ ಹೆಮ್ಮೆಯ ಪುತ್ರರಾದ ನಾವು ದೇಶ ಭಕ್ತಿಯನ್ನು ಬೆಳೆಸಿಕೊಳ್ಳುವ ಜೊತೆಗೆ ಪ್ರಕೃತಿ ಮಾತೆಯ ಆರಾಧಕರು ಕೂಡಾ ಆಗಬೇಕು ಎಂದು ಸಾರುವ ತಿಂಗಳು ಈ ಜನವರಿ. ಭಾರತೀಯರಿಗೆ ಇದು ಬರೀ ವರಿ ಕೊಡುವ ತಿಂಗಳು ಅಲ್ಲ.
ಬರಿ ವರಿ ಬೇಡ ಬರೋಬರಿ ತರಾವಳಿ ಕ್ರಮವಿರಲಿ ಎಂಬಂತೆ ಹಚ್ಚ ಹಸಿರು ಹೊದ್ದ ಭೂತಾಯಿ ಮೈದುಂಬಿ ನಿಂತು ಪರಿಸರ ವೀಕ್ಷಕರನ್ನು ಕೈಬೀಸಿ ಕರೆಯುತ್ತಿದ್ದಾಳೆ. ನೋಡ ಬಾ ನಮ್ಮೂರ….ಎಂದು ಕವಿ ಹಾಡಿದ ಹಾಗೆ ರಮ್ಯ ಪ್ರಕೃತಿ ತಾ ಚಿಗುರು, ಕಾಯಿ ಹೂಗಳಿಂದ ಕಂಗೊಳಿಸುತ್ತ ಸರ್ವ ಹಸಿರು ಪ್ರೇಮಿಗಳ ಕಣ್ಣಿಗೆ ಹಬ್ಬದೂಟ ಬಡಿಸಲು ನಿಂತ ಹಾಗಿದೆ.
ಇದರ ನಡುವೆ ಕ್ರೂರ ಮಾನವರು ಸ್ವಚ್ಛತೆ, ತಾಂತ್ರಿಕತೆ, ಹೊಸ ಜಗತ್ತು, ಬದಲಾವಣೆ, ಹೊಸತನ ಎಂಬ ಹೆಸರಿನಲ್ಲಿ ಹಲವಾರು ವರ್ಷಗಳಿಂದ ಬೆಳೆದು ನಿಂತು ಸಾವಿರಾರು ಜನರಿಗೆ ಆಮ್ಲಜನಕ ಒದಗಿಸಿದ ಹಳೆ ಮರಗಳನ್ನು ಅವು ಬಿದ್ದು ಹೋದರೆ ನಮಗೆ ತೊಂದರೆ ಎಂದು ತಾವು ತಾವೇ ಅಂದಾಜಿಸಿಕೊಂಡು, ಬುಡ ಸಮೇತ ಮರಗಳ ಸಾಮೂಹಿಕ ಕಗ್ಗೊಲೆ ನಡೆದರೆ ಉಳಿದ ಜನ ಮೂಕ ಪ್ರೇಕ್ಷಕರು ಅಷ್ಟೇ. ಅಲ್ಲಿ ಬದುಕಿನ ಗಾಳಿ ನೀಡುವ ಮರಗಳಿಗಿಂತ ಬದುಕಿರುವ ಸಿರಿವಂತ ಮನುಷ್ಯರು ಓದಿಸುವ ಐಷಾರಾಮಿ ಕಾರುಗಳು ಮುಖ್ಯ. ಆ ಕಾರುಗಳು ವೇಗವಾಗಿ ಓಡಾಡಲು ಅಗಲವಾದ ಅಂದದ ರಸ್ತೆ ಮುಖ್ಯ. ಅಲ್ಲಿರುವ ಹೆಮ್ಮರ ಕಸ, ಅದು ಅಡ್ಡ! ಮತ್ತೆ ಮರವಾಗುವ ಗಿಡ ನೆಟ್ಟು ಕೇರ್ ಮಾಡಿ ಬೆಳೆಸುವ ವ್ಯವಧಾನ ಯಾರಿಗಿದೆ ಹೇಳಿ? ಇದು ಫಾಸ್ಟ್ ಯುಗ. ತನ್ನ ಸಮಯ, ನಿದ್ದೆ, ಊಟದ ಕಡೆಗೆ ಕೂಡಾ ಮನುಷ್ಯ ಹೆಚ್ಚು ಹೊತ್ತು ಯೋಚಿಸಲು ಸಮಯ ಇಲ್ಲ, ಇನ್ನೂ ಬದುಕಿರುವ , ಸಾಯಿಸಿದ ಮರಗಳ ಬಗ್ಗೆ ಯಾರೂ ತಾನೇ ಯೋಚಿಸುತ್ತಾರೆ ಹೇಳಿ?
ಇದೀಗ ಯಾವುದೇ ಯುಗ ಆದರೂ ಕುಡಿಯಲು ನೀರು, ತಿನ್ನಲು ಊಟ ಉಸಿರಾಡಲು ಗಾಳಿಗೆ ಮೂಲ ಸಸ್ಯಗಳೆ. ಯಾವ ಕಾಲ ಆದರೂ ಗಿಡ ಮರ ಕೊಂದು ನಾವು ಬದುಕಲಾರೆವು ಎಂಬ ಸಾರ್ವಕಾಲಿಕ ಸತ್ಯವನ್ನು ಮರ ಕಡಿದು ಬೋಳಾಗಿಸುವ ಮಾನವರಾದ ನಾವು ಒಪ್ಪಿಕೊಳ್ಳಲೇ ಬೇಕಲ್ಲವೇ? ನೀವೇನಂತೀರಿ?
ಹನಿಬಿಂದು
ಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154