ಕಾವ್ಯ ಸಂಗಾತಿ
ಬರಿದಾದ ಮನ
ಅಭಿಜ್ಞಾ ಪಿ.ಎಮ್.ಗೌಡ
ಖಾಲಿ ಖಾಲಿಯಾಗಿದೆ
ಅಂತರಂಗದ ಬೀದಿ ಬೀದಿಗಳಿಂದು
ನಿರ್ಜನ, ನಿರ್ಲಿಪ್ತತೆ
ನಿರ್ವೀರ್ಯ, ನಿರ್ವೇಗದಿಂದಾಗಿ
ನಿತ್ರಾಣಗೊಂಡ ಊರಿಂದು
ಅದೇಕೊ ಅದೇನೋ
ಗರಬಡಿದ ಶಿಲೆಯಂತಾಗಿ
ನೂರಾರು ಪ್ರಶ್ನೆಗಳು ಭುಗಿಲಿಡುತಿವೆ..
ಖಿನ್ನತೆ, ಹತಾಶೆ,
ದಿಗಿಲುಗಳ ಪಾರಪತ್ಯ
ಆಂತರ್ಯವನ್ನೆ ಬೆಚ್ಚಿಬೀಳಿಸಿ
ಅಟ್ಟಹಾಸ ಮೆರೆದು
ದಟ್ಟಡವಿಯ ಕಾರ್ಗತ್ತಲಿನ
ನೋಟದಂತಾಗಿದೆ ಮೌನ
ಎದೆಯೂರಿನೊಳಗೆ
ಬರೀ ಕಪ್ಪನೆಯ ಕತ್ತಲಿನ
ವ್ಯಾಪಿಸುವಿಕೆ
ಸಾಲಿಡುವಂತೆ ಸಾಗಿದೆ ಈ ಯಾನ…
ಒಳಾಂಗಣದೊಳಗೆ ಭಾವವೆಂಬ
ಯಾವ ಹೂವುಗಳು
ಅರಳಿಲ್ಲವಿಂದು
ಅರಳುವ ಮುನ್ಸೂಚನೆಯು
ಕಾಣುತಿಲ್ಲವಿಂದು
ಇದೊಂತರ ಚಿಂತೆಯ ಓಟ
ಈ ಮನವೆಂಬ ಸಂತೆಯ ಆಟದಲಿ
ಅದೆಷ್ಟೋ ಭಾವನೆಗಳು
ಮಾರಾಟಕ್ಕಿವೆ ಕಂಡೀರಾ…?
ಇಲ್ಲಿ ಕೇಳಿ
ಚೌಕಾಸಿ ಮಾಡಿಯಾದರು ಸರಿ
ಕೊಳ್ಳಬೇಕೆನಿಸುತಿದೆ
ಏನನ್ನ ಗೊತ್ತೆ..?
ಈ ಭಾವಗಳ ಉದ್ದಗಲದ
ಕೌತುಕಗಳು,ಉದ್ವೇಗಗಳು
ಅನಿಶ್ಚತೆಗಳೆಲ್ಲವನು
ಅರಿತು ಬೆರಿಯಬೇಕೆನಿಸಿದೆ…
ಆದರೂ
ಆಂತರ್ಯದ ಮಹಲುಗಳು
ಚಿಂತೆಗಳೆಂಬ ಸುಳಿಯೊಳಗೆ
ಸುರುಳಿಯಾಗುತಿವೆ
ಅದೆಷ್ಟು ನೋವು
ಅದೆಷ್ಟು ಭಾವುಕತೆ ಅಬ್ಬಬ್ಬಾ..!
ಕುತೂಹಲಕಾರಿ.!
ಬಹಿರಂಗಕೆ ತೋರ್ಪಡಿಸದೆ
ಒಳಗೊಳಗೆ ಮಂಥಿಸೊ
ಕಲೆಯ ಹಬ್ಬದಂತೆ ಮನದಕಬ್ಬ…!
ತನ್ಮಯಕ್ಕೊಂದು ಹಿಡಿದ
ಕನ್ನಡಿ ದಿಟ ಚೇತೋಹಾರಿ…!
ಏಕಾಂತದ ನಿಶಾಂತ
ಅದೊಂತರ ನಿಶಾನಿ
ನಿಶಿತಮತಿಯ ಗರ್ವಭಂಗ
ಈ ನಿಶೀಥದೊಳಗೆ…
ಆ ನಿಶೀಥಿನಿಗೇಕಿಷ್ಟು ಬಿಡದ ಚಟ
ಕಂಗಳ ಕೊಳದ ತುಂಬ
ನಿದಿರೆಯ ತೇಲಿಸುವ ಹಠ
ಮೆತ್ತೇರಿಸಿ ಮಂಪರೇರಿಸೊ ಚಟ..!
ಎದೆಯೂರಿನಲಿ
ಮೌನವೆಂಬ ಸೂತಕವಿದ್ದರು
ನಿರ್ವೀರ್ಯಗೊಂಡಿದ್ದರು
ತಳ್ಳುತಿದೆ ,ತಬ್ಬುತಿದೆ
ಶಪಿಸುತಿದೆ ,ಈ ನಿಶೀಥಿನಿಯ
ಬಿಟ್ಟು ಬಿಡದ ನಿಶ್ರೇಣಿಯ…
ಕೂಡಿಟ್ಟ ಅಭೀಪ್ಸೆಗಳು
ನನಸಾಗದ ಕನಸುಗಳ ಅವಶೇಷಗಳ
ದಿಬ್ಬಣ ಸಾಗುತಿವೆ
ಬರಿದಾದ ಮನದೊಳಗೆ
ನಿಶ್ಯಬ್ಧದ ಬೀದಿಯೊಳಗೆ
ಎಲ್ಲೆಲ್ಲೂ ನೀರವತೆಯ ರೌದ್ರವತೆ…